ADVERTISEMENT

ದಸರಾ; ಬೈಕ್‌, ಕಾರು ಮಾರಾಟ ಏರಿಕೆ

ಶೋರೂಂಗಳಲ್ಲಿ ಗ್ರಾಹಕರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:17 IST
Last Updated 17 ಅಕ್ಟೋಬರ್ 2018, 19:17 IST

ಬೆಂಗಳೂರು: ನಗರದಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮಾರಾಟ ಭರ್ಜರಿಯಾಗಿ ಸಾಗಿದೆ. ದಸರಾ ಹಬ್ಬದ ಪ್ರಯುಕ್ತ ಅಬ್ಬರದ ಪ್ರಚಾರ ನಡೆಸಿ ಹಾಗೂ ದರ ರಿಯಾಯಿತಿ ಘೋಷಿಸಿದ್ದ ವಾಹನ ಕಂಪನಿಗಳು ಭಾರೀ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ.

ಮಾರುತಿ ಸುಝುಕಿ, ಫೋರ್ಡ್‌, ದಟ್ಸನ್‌ ಸೇರಿದಂತೆ ವಿವಿಧ ಕಾರು ಕಂಪನಿಗಳು, ಹೀರೋ, ಬಜಾಜ್‌, ಹೊಂಡಾ ದ್ವಿಚಕ್ರ ವಾಹನ ಕಂಪನಿಗಳ ಷೋರೂಂಗಳಲ್ಲಿ ಬುಧವಾರ ಗ್ರಾಹಕರ ದಟ್ಟಣೆ ಹೆಚ್ಚು ಇತ್ತು. ಗಣನೀಯ ಪ್ರಮಾಣದ ರಿಯಾಯಿತಿ ಇರಲಿಲ್ಲ. ಆದರೆ, ಕೆಲವು ಕಾರು ಕಂಪೆನಿಗಳು ಉಚಿತ ವಿಮೆ, ₹ 1 ಪ್ರೀಮಿಯಂ ಮೊತ್ತದ ವಿಮೆ, ಕಡಿಮೆ ಬಡ್ಡಿಯ ಸಾಲ, ಅಲಂಕಾರಿಕ ಸಾಮಗ್ರಿಗಳು, ಮಳೆ ಕವರ್‌, ಉಚಿತ ವಾರ್ಷಿಕ ನಿರ್ವಹಣೆ ಕೊಡುಗೆ ಘೋಷಿಸಿದ್ದವು.

ದ್ವಿಚಕ್ರ ವಾಹನ ಕಂಪನಿಗಳು ಮೇಲಿನ ಕೊಡುಗೆಗಳ ಜತೆಗೆ ವಾಹನಗಳ ಬೆಲೆಯಲ್ಲೂ ಇಳಿಕೆ ಘೋಷಿಸಿದ್ದವು. ಕೆಲವು ಕಂಪನಿಗಳು ವಿನಿಮಯ ಕೊಡುಗೆ ಪ್ರಕಟಿಸಿವೆ. ಹೀರೋ ಮತ್ತು ಬಜಾಜ್‌ ದರ ಇಳಿಕೆ ಕೊಡುಗೆ ನೀಡಿವೆ. ಟಿವಿಎಸ್‌ ಕಂಪನಿ ಕಡಿಮೆ ಮೊತ್ತದ ಡೌನ್‌ ಪೇಮೆಂಟ್‌ (ಖರೀದಿಯ ಆರಂಭಿಕ ಮೊತ್ತ) ಘೋಷಿಸಿತ್ತು.

ADVERTISEMENT

ನವರಾತ್ರಿ ಆರಂಭದಿಂದಲೂ ಸಾಕಷ್ಟು ಕೊಡುಗೆಗಳನ್ನು ಕಂಪನಿಗಳು ಘೋಷಿಸಿದ್ದವು. ಅಲ್ಲಲ್ಲಿ ಮಾರಾಟ ಮೇಳಗಳೂ ನಡೆದಿವೆ. ಅ. 16ರಿಂದ 19ರವರೆಗೆ ಮಾರಾಟ ಪ್ರಮಾಣ ಏರುಗತಿಯಲ್ಲಿ ಸಾಗಿದೆ.

‘ದಸರಾ ಹಬ್ಬದ ಸಂದರ್ಭದಲ್ಲೇ ವಾಹನ ಕೊಳ್ಳುವುದು ಶುಭ ಎಂಬ ನಂಬಿಕೆ ನಮ್ಮದು. ಜೀವನದಲ್ಲಿ ಮೊದಲ ಬಾರಿ ವಾಹನ ಖರೀದಿಸುತ್ತಿದ್ದೇನೆ’ ಎಂದು ಬೈಕ್‌ ಖರೀದಿಸಲು ಮುಂದಾದ ಬಸವನಗುಡಿಯ ಯುವಕ ರಾಜೇಶ್‌ ಹೇಳಿದರು.

‘ಷೋರೂಂಗಳ ಕೊಡುಗೆ ನೋಡಿಕೊಂಡು ಬಂದಿಲ್ಲ. ಈ ಬಾರಿ ಹಬ್ಬದ ಬೋನಸ್‌ ಬಂದಿದೆ. ಡೌನ್‌ಪೇಮೆಂಟ್‌ಗೆ ಅನುಕೂಲವಾಯಿತು. ಉಳಿದಂತೆ ಸಾಲ ಸೌಲಭ್ಯವೂ ಸಿಕ್ಕಿದೆ. ಆರ್ಥಿಕ ಅನುಕೂಲತೆಯ ಕಾರಣದಿಂದ ವಾಹನ ಖರೀದಿಸಲು ಬಂದಿದ್ದೇವೆ’ ಎಂದು ಬೈಕ್‌ ಖರೀದಿ ಇನ್ನೊಬ್ಬ ಗ್ರಾಹಕ ದಯಾನಂದ ಹೇಳಿದರು.

‘ನವರಾತ್ರಿಯಿಂದ ದೀಪಾವಳಿವರೆಗೆ ಪ್ರತಿ ಹಬ್ಬದ ಸೀಸನ್‌ನಲ್ಲಿ ವಾಹನಗಳ ಮಾರಾಟ ಏರುಮುಖವಾಗಿಯೇ ಇರುತ್ತದೆ. ಹಬ್ಬದೊಂದಿಗಿರುವ ಭಾವನಾತ್ಮಕ ನಂಟು ಮತ್ತು ಆರ್ಥಿಕ ಅನುಕೂಲತೆಗಳು ಈ ಹೆಚ್ಚಳಕ್ಕೆ ಕಾರಣ’ ಎಂದು ರಾಜಾಜಿನಗರದ ದ್ವಿಚಕ್ರ ವಾಹನ ಶೋರೂಂ ಸಿಬ್ಬಂದಿಯೊಬ್ಬರು ಹೇಳಿದರು.

ಮೊಬೈಲ್‌ ಮತ್ತು ಇತರ ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟವೂ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.