ADVERTISEMENT

ಮೈಸೂರು: ಒಂದು ನಗರಿ, ಹಲವು ವೈಭವ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 5:17 IST
Last Updated 10 ಅಕ್ಟೋಬರ್ 2018, 5:17 IST
ದೀಪಾಲಂಕಾರದಲ್ಲಿ ಮೈಸೂರು ಅರಮನೆ (ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್.)
ದೀಪಾಲಂಕಾರದಲ್ಲಿ ಮೈಸೂರು ಅರಮನೆ (ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್.)   

ಮೈಸೂರು:ನಗರದಲ್ಲೀಗಸಾಂಸ್ಕೃತಿಕ ಸಂಗಮ ಹಾಗೂ ನವರಾತ್ರಿಯ ಸಡಗರ. ಸಾಂಸ್ಕೃತಿಕ ವಲಯ, ಕಲಾ ರಸಿಕರ ಚಿತ್ತವೆಲ್ಲಾ ಅರಮನೆಗಳ ನಗರಿಯತ್ತ ನೆಟ್ಟಿದೆ. ವೈವಿಧ್ಯಮಯ ಕಾರ್ಯಕ್ರಮಗಳನ್ನು ಸವಿಯುತ್ತಾ ವಿದ್ಯುತ್‌ ದೀಪಾಲಂಕಾರದ ವೈಭವದಲ್ಲಿ ಮಿಂದೇಳಲು ಸ್ಥಳೀಯರು ಹಾಗೂ ಪ್ರವಾಸಿಗರು ಸನ್ನದ್ಧರಾಗಿದ್ದಾರೆ.

ಗತವೈಭವ ಸಾರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಚಾಲನೆ ಸಿಗಲಿದೆ. ಇನ್ನು ಹತ್ತು ದಿನ ಸಾಂಸ್ಕೃತಿಕ ಸಿರಿವೈಭವ ಅನಾವರಣಗೊಳ್ಳಲಿದೆ. ಮೈತ್ರಿ ಸರ್ಕಾರದ ಮೊದಲ ದಸರೆ ಇದಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಲವು ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಶರನ್ನವರಾತ್ರಿ ಅಂಗವಾಗಿ ಈ ಬಾರಿ ಹೊಸದಾಗಿ ಮತ್ಸ್ಯಮೇಳ, ಸಾಕುಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿದೆ. ಪಾರಂಪರಿಕಾ ನಡಿಗೆ, 3ಡಿ ಮ್ಯಾಪಿಂಗ್‌, ಲ್ಯಾಂಟರ್ನ್‌ ಉತ್ಸವ ನಡೆಯಲಿದೆ. ಕಿರುಚಿತ್ರ ನಿರ್ಮಾಣ ಕಾರ್ಯಾಗಾರ ಇರಲಿದೆ. ಈ ಬಾರಿ ಜನಾಕರ್ಷಣೆಯ ಓಪನ್‌ ಸ್ಟ್ರೀಟ್‌ ಉತ್ಸವದ ಸ್ಥಳ ಬದಲಾಗಿದ್ದು, ಕೃಷ್ಣರಾಜ ಬುಲೆವಾರ್ಡ್‌ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ADVERTISEMENT

ಸಾಂಸ್ಕೃತಿಕ ಲೋಕ: ಮುಂದಿನ ಹತ್ತು ದಿನಗಳ ಕಾಲ ಮಲ್ಲಿಗೆ ನಗರಿಯಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಸಂಗೀತ, ನೃತ್ಯ, ಕಲೆ, ಸಿನಿಮಾ, ಕವಿಗೋಷ್ಠಿ, ಕ್ರೀಡೆ, ಆಹಾರ ಮೇಳ, ನಾಡಕುಸ್ತಿ ಮೇಳೈಸಲಿವೆ.

ಈ ಬಾರಿ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಕನ್ನಂಬಾಡಿ ಅಣೆಕಟ್ಟೆಯ ಪ್ರತಿಕೃತಿಗಳು ವಿದ್ಯುತ್ ದೀಪಗಳ ಬೆಳಕಿನಲ್ಲಿ ಪ್ರಜ್ವಲಿಸಲಿವೆ. ಅರಮನೆ ಆವರಣ, ಕಾಡಾ ಕಚೇರಿ, ಪಾಲಿಕೆ ಕಚೇರಿ, ಚಾಮುಂಡಿಬೆಟ್ಟ, ವಸ್ತುಪ್ರದರ್ಶನ ಆವರಣ, ಮೃಗಾಲಯ, ನಗರ ಬಸ್‌ ನಿಲ್ದಾಣ, ಕೆ.ಆರ್.ವೃತ್ತ, ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ದೀಪಾಲಂಕಾರ ಮಾಡಲಾಗಿದೆ.

ಅರಮನೆ ಮುಂಭಾಗ ಮಂಗಳವಾರ ಪೊಲೀಸ್‌ ವಾದ್ಯ ವೃಂದವರು ತಾಲೀಮು ನಡೆಸಿದರು. ಸುಮಾರು 450 ಮಂದಿ ಸುಶ್ರಾವ್ಯವಾಗಿ ಬ್ಯಾಂಡ್‌ ನುಡಿಸಿದರು.

ಯದುವೀರಗೆ 4ನೇ ದರ್ಬಾರ್‌: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ನಾಲ್ಕನೇ ಬಾರಿ ಖಾಸಗಿ ದರ್ಬಾರ್‌ಗೆ ಸಿದ್ಧರಾಗುತ್ತಿದ್ದಾರೆ. ಪ್ರಮೋದಾದೇವಿ ಒಡೆಯರ್‌ ಮಾರ್ಗದರ್ಶನದಲ್ಲಿ ಸಂಪ್ರದಾಯದಂತೆ ಕಳಸ ಪೂಜೆ ನೆರವೇರಿಸಿ ರತ್ನ ಖಚಿತ ಸಿಂಹಾಸನದಲ್ಲಿ ದರ್ಬಾರ್‌ ನಡೆಸಲಿದ್ದಾರೆ.ಅ.19ರಂದು ನಡೆಯಲಿರುವ ಜಂಬೂಸವಾರಿ ಹಾಗೂ ಪಂಜಿನ ಕವಾಯತಿನೊಂದಿಗೆ ದಸರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಚಾಮುಂಡಿಬೆಟ್ಟದಲ್ಲಿ ಸಿದ್ಧತೆ: ದಸರಾ ಉದ್ಘಾಟನೆಗಾಗಿ ಚಾಮುಂಡಿಬೆಟ್ಟದಲ್ಲಿ ‍ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ನೇತೃತ್ವದಲ್ಲಿ ಸಿಧ್ಧತೆಗಳು ನಡೆದಿವೆ. ಚಾಮುಂಡೇಶ್ವರಿ ದೇಗುಲದಲ್ಲಿ ಶುದ್ಧಿ ಕಾರ್ಯ, ಅಲಂಕಾರ ಕಾರ್ಯಕ್ರಗಳು ಭರದಿಂದ ಸಾಗಿವೆ. ಬೆಳ್ಳಿರಥವನ್ನು ಸ್ವಚ್ಛಗೊಳಿಸಲಾಗಿದೆ.

ಚಾಮುಂಡೇಶ್ವರಿಗೆ ಮುಂಜಾನೆ 4.30ಕ್ಕೆ ರುದ್ರಾಭಿಷೇಕ, ಪಂಚಾಮೃತಭಿಷೇಕ ನಡೆಯಲಿದೆ. ಬ್ರಾಹ್ಮಿ ಅಲಂಕಾರ ಮಾಡಲಾಗುತ್ತದೆ. 7.05 ರಿಂದ 7.30ಕ್ಕೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ದಸರೆಗೆ ವಿದ್ಯುಕ್ತ ಚಾಲನೆ ಲಭಿಸಲಿದೆ.

ಬನ್ನಿಮಂಟಪದಲ್ಲಿಆಸನ ಹೆಚ್ಚಳ:ಕಣ್ಮನ ಸೆಳೆಯುವ ದಸರಾ ಮಹೋತ್ಸವದ ಪಂಜಿನ ಕವಾಯತು ವೀಕ್ಷಿಸಲು ಈ ಬಾರಿ ಮತ್ತಷ್ಟು ಜನರು ಸೇರಬಹುದು. ಏಕೆಂದರೆ ಬನ್ನಿಮಂಟಪ ಮೈದಾನದ ಆಸನ ಸಾಮರ್ಥ್ಯ ಹೆಚ್ಚಿಸಲಾಗಿದೆ. ಈ ಮೈದಾನದಲ್ಲಿ ಈಗ ಸುಮಾರು 33,500 ಜನರು ಕುಳಿತು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಈ ಹಿಂದೆ ಕೇವಲ 22 ಸಾವಿರ ಮಂದಿ ಕುಳಿತುಕೊಳ್ಳಲು ಅವಕಾಶವಿತ್ತು.

ಉದ್ಘಾಟನೆಗಳ ಭರಾಟೆ

ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಲಭಿಸಲಿರುವ ಚಾಲನೆ ಸೇರಿದಂತೆ ಬುಧವಾರ ಸಾಲುಸಾಲು ಉದ್ಘಾಟನಾ ಕಾರ್ಯಕ್ರಮಗಳು ಇರಲಿವೆ. 12 ಕಾರ್ಯಕ್ರಮಗಳಿಗೆ ದಿನವಿಡೀ ವಿವಿಧ ಸ್ಥಳಗಳಲ್ಲಿ ಚಾಲನೆ ಲಭಿಸಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ದಸರಾ ಉದ್ಘಾಟನೆ, ಚಲನಚಿತ್ರೋತ್ಸವ, ಕುಸ್ತಿ, ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.

ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮ

* ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಮುನ್ನುಡಿ

* ಬೆಟ್ಟದಲ್ಲಿ ಪೊಲೀಸ್‌ ಸಹಾಯಕ ಕೇಂದ್ರ ಉದ್ಘಾಟನೆ

* ಬೆಟ್ಟದಲ್ಲಿ ದಸರಾ ಕ್ರೀಡಾಜ್ಯೋತಿಗೆ ಚಾಲನೆ

* ಕಲಾಮಂದಿರದಲ್ಲಿ ಚಲನಚಿತ್ರೋತ್ಸವ

* ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ಆಹಾರ ಮೇಳ

* ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಕುಸ್ತಿ

* ಕಾಡಾ ಕಚೇರಿಯಲ್ಲಿ ಪುಸ್ತಕ ಮೇಳ

* ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ

* ಕುಪ್ಪಣ್ಣ ಪಾರ್ಕ್‌ನಲ್ಲಿ ಗಾಜಿನಮನೆ, ಫಲಪುಷ್ಪ ಪ್ರದರ್ಶನ

* ವಸ್ತುಪ್ರದರ್ಶನ ಆವರಣದಲ್ಲಿ ದಸರಾ ವಸ್ತುಪ್ರದರ್ಶನ

* ಸಯ್ಯಾಜಿರಾವ್‌ ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರ

* ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.