ADVERTISEMENT

ಋಷಿಯೇ ಕವಿ, ಕವಿಯೇ ಋಷಿ

ರಾಮಾಯಣ ರಸಯಾನ 10

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಜುಲೈ 2018, 10:28 IST
Last Updated 31 ಜುಲೈ 2018, 10:28 IST
ವಾಲ್ಮೀಕಿ ಆಶ್ರಮ            –ಚಿತ್ರಕೃಪೆ: ವಿಕಿಪೀಡಿಯಾ
ವಾಲ್ಮೀಕಿ ಆಶ್ರಮ –ಚಿತ್ರಕೃಪೆ: ವಿಕಿಪೀಡಿಯಾ   

ಭಾರತೀಯ ಪರಂಪರೆಯಲ್ಲಿ ಬಹುಪಾಲು ಸಂದರ್ಭದಲ್ಲಿ ಕವಿ–ಕಲಾವಿದರು ತಮ್ಮ ವೈಯಕ್ತಿಕ ವಿವರಗಳನ್ನು ನೀಡದಿರುವುದು ಆಕಸ್ಮಿಕವಲ್ಲ. ಕಾಲಿದಾಸ ಮುಂತಾದ ಮಹಾಕವಿಗಳನ್ನೂ ಶಂಕರಾಚಾರ್ಯರಂಥ ದಾರ್ಶನಿಕರನ್ನೂ ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಈ ಮನೋಧರ್ಮಕ್ಕೆ ಭಿತ್ತಿಯಾಗಿ ಇಲ್ಲಿಯ ಪ್ರಾಚೀನ ಜೀವನ–ಕಲಾದರ್ಶನದ ಆದರ್ಶ ಮತ್ತು ತತ್ತ್ವಗಳು ಕೆಲಸ ಮಾಡಿರುವುದು ಸ್ಪಷ್ಟ. ಆನಂದ ಕುಮಾರಸ್ವಾಮಿಯವರಂಥ ಕಲಾಯೋಗಿಗಳು ಈ ಮೂಲತತ್ತ್ವಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ.

ಈ ಎಲ್ಲದರ ಸಾರವಾಗಿ ಆನಂದ ಕುಮಾರಸ್ವಾಮಿಯವರ ಮಾತೊಂದನ್ನು ಇಲ್ಲಿ ಉಲ್ಲೇಖಿಸಬಹುದು: ‘The Divine ‘making’ is not operation apart from being: it is an act of being'. ದೈವಿಕವಾದುದರ ರಚನೆಗೂ ವ್ಯಕ್ತಿತ್ವಕ್ಕೂ ನೇರ ಸಂಬಂಧವಿರುವುದನ್ನು ಈ ಮಾತು ಎತ್ತಿಹಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ‘ವಲ್ಮೀಕ’ದಿಂದ ಮರುಹುಟ್ಟು ಪಡೆದವನಷ್ಟೆ ‘ವಾಲ್ಮೀಕಿ’ಮಹರ್ಷಿ ಆಗಲು ಸಾಧ್ಯ. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ–ರೇಖೆ?’ ಗೋಪಾಲಕೃಷ್ಣ ಅಡಿಗರ ಈ ಮಾತನ್ನು ಇಲ್ಲಿ ಮೆಲುಕು ಹಾಕಬಹುದು. ‘ಅಲೌಕಿಕ’ವಾದುದನ್ನು ನಿರೂಪಿಸಿದವನು ಅಲೌಕಿಕ ವ್ಯಕ್ತಿತ್ವದವನೂ ಆಗಿರಬೇಕು.

ರಾಮನಂಥ ಅಲೌಕಿಕ ವ್ಯಕ್ತಿತ್ವವನ್ನು ಕಂಡರಿಸುವ ಮೊದಲು ವಾಲ್ಮೀಕಿ ಮಹರ್ಷಿ ಅಂಥ ಅಲೌಕಿಕ ವ್ಯಕ್ತಿತ್ವವನ್ನು ಪಡೆದುಕೊಂಡಿರುವುದರ ಸೂಚನೆಯು ನೀರಿನ ತಿಳಿತನದಲ್ಲಿ ಬಿಂಬಿತವಾಗಿದೆ. ‘The mind of the sage, being in repose, becomes the mirror of the Universe, a reflection of all creation’ ಎಂದಿದ್ದಾನೆ, ಚೀನಾದೇಶದ ದಾರ್ಶನಿಕ ಚುವಾಂಗ್–ಸು (Chuang Tzu). ‘ಸಮಾಧಾನದಲ್ಲಿರುವ ಋಷಿಯ ಮನಸ್ಸು ಇಡಿಯ ಬ್ರಹ್ಮಾಂಡದ ಕನ್ನಡಿಯಂತೆ, ಸಮಸ್ತ ಸೃಷ್ಟಿಯೂ ಅದರಲ್ಲಿ ಪ್ರತಿಫಲನವಾಗುವುದಂತೆ’. ತಿಳಿತನ ಎಂದರೆ ಇಂಥದೇ ಸ್ಥಿತಿ ಅಲ್ಲವೆ? ಕವಿಪ್ರತಿಭೆಯಲ್ಲಿ ಸೃಷ್ಟಿಯ ಯಾವುದೇ ವಿವರವೂ ಅರಳಬಹುದು. ಕವಿಪ್ರತಿಭೆಗೆ ಮೂಲಭಿತ್ತಿ ತಿಳಿತನ, ಪಾರದರ್ಶಕತೆ. ಇದು ಋಷಿಗೂ ಕವಿಗೂ ಸಮಾನವಾಗಿರುವ ಗುಣ. ವೇದದಲ್ಲಿ ಋಷಿಯನ್ನು ‘ಕವಿ’ ಎಂದೇ ಒಕ್ಕಣಿಸಲಾಗಿದೆ. ಪರಿಪೂರ್ಣ ಮನುಷ್ಯ ಏಕಾಗ್ರತೆಯಿಂದ ಋಷಿತ್ವವನ್ನೂ ಕ್ರಿಯಾಶೀಲತೆಯಿಂದ ರಾಜತ್ವವನ್ನೂ ಸಂಪಾದಿಸುತ್ತಾನೆ – ಎನ್ನುವುದು ಕೂಡ ಚುವಾಂಗ್‌–ಸುವಿನ ಮಾತೇ.

ವಾಲ್ಮೀಕಿಮಹರ್ಷಿಯು ‘ಹುತ್ತ’ದಿಂದ ಹುಟ್ಟಿ ಋಷಿತ್ವವನ್ನೂ, ಅದರಿಂದ ಸಮಾಧಾನವನ್ನೂ ಕವಿತ್ವವನ್ನೂ ಸಿದ್ಧಿಸಿಕೊಂಡವನು. ಹೀಗಾಗಿ ನಮಗೆ ವಾಲ್ಮೀಕಿಯ ದಿಟವಾದ ವ್ಯಕ್ತಿತ್ವವನ್ನು ಕಾಣಬೇಕಾದರೆ ಅವನ ರಾಮಾಯಣಕಾವ್ಯವನ್ನೇ ನೋಡಬೇಕಾಗುತ್ತದೆ. ಅವನ ಕಾವ್ಯ ಯಾವ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎನ್ನುವುದು ಅವನ ವ್ಯಕ್ತಿತ್ವದ ಕನ್ನಡಿಯೂ ಹೌದು. ರಾಮಾಯಣದ ಆಶಯ–ಆದರ್ಶಗಳು ಎಲ್ಲ ಕಾಲದ ಮಾರ್ಗ–ಗುರಿಗಳೂ ಆಗಿರುವುದರಿಂದ ವಾಲ್ಮೀಕಿ–ಶ್ರೀರಾಮ–ಸೀತೆಯರು ಎಲ್ಲರ ಊರಿನವರೂ ಹೌದು; ಎಲ್ಲರ ಮನೆಯವರೂ ಹೌದು. ಹೀಗಿದ್ದಾಗ ವಾಲ್ಮೀಕಿಯ ಹೊರಗಿನ ವಿವರಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಕಾದುದಿಲ್ಲ ಎನಿಸುತ್ತದೆ. ಡಿವಿಜಿಯವರ ಮಾತುಗಳನ್ನೇ ಇಲ್ಲಿ ಮತ್ತೆ ಉಲ್ಲೇಖಿಸಬಹುದು:

‘ಕವಿಯ ಕಾಲದೇಶಾದಿ ಜೀವನಸಂಗತಿಗಳನ್ನು ಕುರಿತು ಹೆಚ್ಚು ಶ್ರಮ ಪಡುವುದು ಪಾಶ್ಚಾತ್ಯ ಶೋಧಕರ ಪದ್ಧತಿ. ನಮಗೆ ಕವಿಗಿಂತ ಕಾವ್ಯ ಮುಖ್ಯ. ಕಾವ್ಯಕಾರಣದಿಂದ ಕವಿ ಬೇಕಾದವನೇ ಹೊರತು ಕವಿಯ ಕಾರಣದಿಂದ ಕಾವ್ಯ ಬೇಕಾದದ್ದೆಂದಲ್ಲ.

ವಾಲ್ಮೀಕಿಯ ವಾಸಸ್ಥಲವೆನಿಸಬಯಸುವ ಊರುಗಳು ನೂರಿವೆ. ಮುಳಬಾಗಲು ಬಳಿಯ ಆವನಿಯ ಜನ ಅದೇ ಆವಂತೀಕ್ಷೇತ್ರವೆಂದೂ ಅಲ್ಲಿಯೇ ಸೀತಮ್ಮ ಬಾಣಂತಿಯಾಗಿದ್ದದ್ದೆಂದು ಹೇಳಿ, ಗುಡ್ಡದಲ್ಲಿ ಒಂದು ಹೊಂಡವನ್ನು ತೋರಿಸಿ ಅದೇ ಆಕೆ ಮಕ್ಕಳ ಬಟ್ಟೆ ಒಗೆಯುತ್ತಿದ್ದ ಜಾಗವೆನ್ನುತ್ತಾರೆ. ಅದು ಅವರ ಸ್ವಸ್ಥಲಾಭಿ
ಮಾನ. ನಮಗೆ ಸಂತೋಷ. ಅದನ್ನು ಹಾಗಲ್ಲವೆನ್ನದೆ, ನಕ್ಕು ಒಪ್ಪಿಕೊಂಡಂತೆ ಇದ್ದರೆ ಅದರಿಂದ ನಮ್ಮ ಕಾವ್ಯಾನುಭವಕ್ಕೆ ಎಷ್ಟು ಮಾತ್ರವೂ ಭಂಗ ಬಾರದು. ವಾಲ್ಮೀಕಿ ಆವನಿಯವನಲ್ಲ; ಮದ್ರಾಸ್‌ ಬಳಿಯ ವನ್ಮಿಯೂರಿನವನು ಎನ್ನುತ್ತಾರೆ ಅಲ್ಲಿಯವರು. ಹಾಗೂ ಆಗಲಿ. ವಾಲ್ಮೀಕಿ ಎಲ್ಲಿಯವನಾದರೂ ನಮ್ಮವನೇ – ನಮಗೆ ಅವನ ಕಾವ್ಯ ಬೇಕೆನಿಸಿದ ಪಕ್ಷದಲ್ಲಿ.’

ADVERTISEMENT

ಮಹಾಕೃತಿಯನ್ನು ಅನುಸಂಧಾನಿಸುವ ಮೊದಲು ನಮ್ಮ ಮನಸ್ಸಿಗೆ ಸಿದ್ಧತೆ ಬೇಕಾಗುತ್ತದೆ. ಹೀಗಾಗಿಯೇ ಸಹೃದಯತತ್ತ್ವಕ್ಕೆ ನಮ್ಮಲ್ಲಿ ಹೆಚ್ಚಿನ ಮನ್ನಣೆಯನ್ನು ನೀಡಿರುವುದು. ಮಹಾಕೃತಿಯನ್ನು ಹೇಗೆ ನೋಡಬೇಕು ಎಂಬ ದೃಷ್ಟಿ ನಮಗೆ ಒದಗಿದರೆ ಆ ಕೃತಿಯನ್ನು ಈಗಾಗಲೇ ಅರ್ಧದಷ್ಟು ಸವಿದಿದ್ದೇವೆ ಎಂದೇ ಹೌದು. ಹೀಗಾಗಿ ರಾಮಾಯಣ ದಿಟವಾದ ಕಥೆಯ ಆರಂಭಕ್ಕೂ ಮೊದಲು ಇಷ್ಟೆಲ್ಲ ಹೇಳಬೇಕಾಯಿತು.

‘ವೀರನಾರಾಯಣನೇ ಕವಿ ಲಿಪಿಕಾರ ಕುವರವ್ಯಾಸ’ ಎಂದ ಕುಮಾರವ್ಯಾಸ ಮಾತು ಕೂಡ ಭಾರತೀಯ ಕಲಾಮೀಮಾಂಸೆಯ ಮೂಲತತ್ತ್ವದ ಬಗ್ಗೆ ಬೆಳಕು ಚೆಲ್ಲುತ್ತದೆ. ಆದರೆ ವೀರನಾರಾಯಣನನ್ನು ಅವನು ‘ಗದುಗಿನ ವೀರನಾರಾಯಣ’ ಎಂದೇ ಸ್ತುತಿಸಿರುವುದನ್ನೂ ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.