ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸಪ್ತರ್ಷಿಗಳ ಪೂಜಿಸಿದ ಹಿಮವಂತ

ಭಾಗ 247

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ಅಕ್ಟೋಬರ್ 2022, 19:30 IST
Last Updated 11 ಅಕ್ಟೋಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಶಿವನ ಮಾತನ್ನು ಕೇಳಿ ಮುನಿಗಳು ಸಂತೋಷಗೊಂಡು, ‘ನಾವು ಧನ್ಯರಾದೆವು ದೇವ. ಸೇವಕರಂಥ ನಮ್ಮನ್ನು ವಿವಾಹ ರಾಯಭಾರಕ್ಕೆ ನಿಯೋಜಿಸುತ್ತಿರುವೆ. ನೀನು ಜಗತ್ತಿಗೆ ತಂದೆಯಾದರೆ, ಪಾರ್ವತಿ ಜಗನ್ಮಾತೆ. ನಿಮ್ಮ ವಿವಾಹವು ಯುಕ್ತವಾದುದು’ ಎಂದು ಹಾರೈಸಿದರು.

ಹಿಮವಂತನ ರಾಜಧಾನಿಗೆ ಬಂದ ಸಪ್ತರ್ಷಿಗಳು ನಗರದ ಸೌಂದರ್ಯ ನೋಡಿ ವಿಸ್ಮಯಗೊಂಡರು. ಹಿಮವಂತನ ರಾಜಧಾನಿಯು ವಿಶ್ವದ ಸುಂದರ ಹಾಗೂ ಭವ್ಯ ನಗರಗಳೆನಿಸಿದ ಅಲಕಾನಗರ, ಸ್ವರ್ಗ, ಭೋಗವತಿ, ಅಮರಾವತಿ ನಗರಗಳಿಗಿಂತಲೂ ತುಂಬಾ ಉತ್ತಮವಾಗಿದೆ ಎಂದು ಉದ್ಗರಿಸಿದರು. ಮನೆಗಳು ಸ್ಫಟಿಕಗಳಿಂದ ನಿರ್ಮಾಣವಾಗಿತ್ತು. ಸೂರ್ಯಕಾಂತರತ್ನಗಳು, ಚಂದ್ರಕಾಂತರತ್ನಗಳು ಪ್ರತಿಮನೆಗಳಲ್ಲೂ ಶೋಭಿಸುತ್ತಿದ್ದವು. ಕಲ್ಪವೃಕ್ಷಗಳು ಪ್ರತಿಮನೆಗಳಲ್ಲಿಯೂ ಕಂಗೊಳಿಸುತ್ತಿದ್ದರೆ, ಮನೆ ಬಾಗಿಲುಗಳಿಗೆ ಸುಂದರವಾದ ತೋರಣಗಳನ್ನು ಕಟ್ಟಲಾಗಿತ್ತು.

ನಗರದ ಸುತ್ತಮುತ್ತ ವಿಚಿತ್ರವಾದ ಶುಕ ಮತ್ತು ಹಂಸಗಳು ವಾಸಿಸುತ್ತಿದ್ದವು. ಆಗಸದಲ್ಲಿ ಪಕ್ಷಿಗಳ ಜೊತೆ ಸುಂದರವಾದ ವಿಮಾನಗಳು ಹಾರಾಡುತ್ತಿದ್ದರೆ, ಅದ್ಭುತವಾದ ಮೇಲುಕಟ್ಟಡಗಳ ಮೇಲೆ ಸುಂದರವಾದ ಧ್ವಜಪಟಗಳು ರಾರಾಜಿಸುತ್ತಿದ್ದವು. ಅಲ್ಲಲ್ಲಿ ಸರೋವರಗಳು, ಕಲ್ಯಾಣಿಗಳು, ವಿಚಿತ್ರವಾದ ಹೂವುಗಳಿಂದ ತುಂಬಿರುವ ಅನೇಕ ಉದ್ಯಾನವನಗಳೂ ಅಲ್ಲಿದ್ದವು.

ADVERTISEMENT

ಕರ್ಮಭೂಮಿಯಾದ ಭೂಲೋಕದಲ್ಲಿ ವಾಸಿಸುವ ಜನ ಇಂಥ ದಿವ್ಯವಾದ ಹಿಮವಂತನಗರವನ್ನು ಬಿಟ್ಟು ಸ್ವರ್ಗ ಸೇರಬೇಕೆಂದು ಯಜ್ಞಯಾಗಾದಿಗಳನ್ನು ಮಾಡುತ್ತಾರೆ. ಸ್ವರ್ಗಕ್ಕಿಂತಲೂ ಸುಂದರವಾದ ಈ ನಗರವನ್ನು ನೋಡದೇ ಇರುವುದರಿಂದ ಜನರು ಸ್ವರ್ಗ ಬಯಸುತ್ತಿದ್ದಾರೆ. ಅವರು ಹಿಮವಂತನ ನಗರವನ್ನು ನೋಡಿದರೆ ಸ್ವರ್ಗದ ಆಸೆ ಬಿಟ್ಟುಬಿಡುತ್ತಾರೆ – ಎಂದು ಸಪ್ತರ್ಷಿಗಳು ಹಿಮವಂತನ ನಗರದ ಸೌಂದರ್ಯವನ್ನು ವರ್ಣಿಸಿದರು.

ಹಿಮವಂತ ತನ್ನ ಅರಮನೆಯತ್ತ ಸಪ್ತರ್ಷಿಗಳನ್ನು ದೂರದಿಂದಲೇ ನೋಡಿ ತುಂಬಾ ಆಶ್ಚರ್ಯಗೊಂಡ. ಅವರು ತನ್ನ ಬಳಿಗೇಕೆ ಬರುತ್ತಿದ್ದಾರೆ ಎಂದು ಯೋಚಿಸಿದ. ಆದರೆ ಆತನಿಗೆ ಹೊಳೆಯಲಿಲ್ಲ. ಏನಾದರಾಗಲಿ, ಋಷಿಗಳನ್ನು ಭಕ್ತಿಯಿಂದ ಬರಮಾಡಿಕೊಳ್ಳಬೇಕು ಎಂದು ಮನದಲ್ಲೇ ನಿಶ್ಚಯಿಸಿದ. ಸರ್ವರಿಗೂ ಕ್ಷೇಮವನ್ನು ಉಂಟುಮಾಡಬಲ್ಲ ಮಹಾತ್ಮರು ನಮ್ಮ ಮನೆಗೆ ಬರುತ್ತಿರುವುದು ತನ್ನ ಅದೃಷ್ಟ. ಇಂತಹವರನ್ನು ಪೂಜಿಸಿದರೆ ಗೃಹಸ್ಥನಾದ ತಾನು ಧನ್ಯನಾಗುವೆ ಅಂದುಕೊಂಡ.

ಸಪ್ತರ್ಷಿಗಳನ್ನು ಹಿಮವಂತ ರಾಜಮರ್ಯಾದೆಗಳೊಡನೆ ಎದುರುಗೊಂಡ. ಭಕ್ತಿಯಿಂದ ನಮಸ್ಕರಿಸಿ, ಪೂಜಿಸಿದ. ಹಿಮವಂತನ ಪೂಜೆಯನ್ನು ಸ್ವೀಕರಿಸಿದ ಸಪ್ತರ್ಷಿಗಳು, ಪ್ರಸನ್ನರಾಗಿ ಮಂಗಳಕರವಾದ ಆಶೀರ್ವಾದ ಮಾಡಿದರು. ಆಗ ಹಿಮವಂತ ‘ಓ ಮುನಿಗಳೇ, ತಮ್ಮ ಆಗಮನದಿಂದ ನನ್ನ ಗೃಹಸ್ಥಾಶ್ರಮವು ಸಾರ್ಥಕವಾಯಿತು’ ಎಂದು ಹೇಳಿ ಭಕ್ತಿಗೌರವದಿಂದ, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಟ್ಟ.

ಮುನಿಗಳೆಲ್ಲ ಆಸನಗಳಲ್ಲಿ ಕುಳಿತ ಮೇಲೆ ಹಿಮವಂತ ಹೇಳಿದ ‘ಮುನಿಗಳೇ, ವಿಷ್ಣುರೂಪಿಗಳಾದ ನೀವು ನನ್ನ ಮನೆಗೆ ಬಂದುದರಿಂದ ನಾನು ಕೃತಕೃತ್ಯನಾದೆ. ಆತ್ಮತೃಪ್ತರಾದ ನಿಮಗೆ ದೀನರಾದ ನಮ್ಮಂತಹವರ ಮನೆಯಲ್ಲಿ ಏನು ಕಾರ್ಯವಿರಬಹುದು? ಕೇವಲ ನನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಬಂದಿರುವಿರಿ ಅನ್ನಿಸುತ್ತೆ. ಹಾಗಿದ್ದರೂ, ಸೇವಕನಾದ ನಾನು ಮಾಡುವಂತಹ ಯಾವುದಾದರೂ ಕಾರ್ಯವಿದ್ದರೆ ಹೇಳಬೇಕು. ಅದನ್ನು ನಿರ್ವಹಿಸಿ ನನ್ನ ಜನ್ಮವನ್ನು ಸಾರ್ಥಕಮಾಡಿಕೊಳ್ಳುವೆ’ ಎಂದ.

ಇಲ್ಲಿಗೆ ಶ್ರೀಶಿವಮಹಾಪುರಾಣದ ಎರಡನೇ ಸಂಹಿತೆಯಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದಲ್ಲಿ ಮೂವತ್ತೆರಡನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.