ADVERTISEMENT

ಅಕ್ರಮ ಮರಳು ಸಾಗಣೆ: 25 ವಾಹನ ವಶ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ದಾವಣಗೆರೆ: ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ತಾಲ್ಲೂಕಿನ ಹಲವೆಡೆ ಸೋಮವಾರ ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 25 ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪ್ರಾದೇಶಿಕ ಸಾರಿಗೆ, ನಗರ ಪಾಲಿಕೆ ಅಧಿಕಾರಿಗಳು ಹಾಗೂ ನಗರ ಪೊಲೀಸರನ್ನು ಒಳಗೊಂಡ ತಂಡ ಹರಿಹರ ಹಾಗೂ ಕೊಂಡಜ್ಜಿ ರಸ್ತೆಯಲ್ಲಿ ಮರಳು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿ, ಪರವಾನಗಿ ಇಲ್ಲದ, ನಿಯಮಕ್ಕಿಂತ ಅಧಿಕ ಮರಳು ತುಂಬಿದ್ದ, ರಾಜಧನ ಸಲ್ಲಿಸದೇ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ 9 ಟ್ರ್ಯಾಕ್ಟರ್, ಮಿನಿಲಾರಿ ಸೇರಿದಂತೆ 25 ವಾಹನಗಳು ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದು ಪತ್ತೆಯಾಯಿತು. ನಿಯಮ ಉಲ್ಲಂಘಿ ಸಿದ ಎಲ್ಲ ವಾಹನಗಳನ್ನು ಹೈಸ್ಕೂಲ್ ಮೈದಾನದಲ್ಲಿ ಸಾಲಾಗಿ ನಿಲ್ಲಿಸಿದ್ದ ದೃಶ್ಯ ಕಂಡುಬಂತು.

ಪರವಾನಗಿ ಇಲ್ಲದ ವಾಹನಗಳಿಗೆ ಪ್ರದೇಶಿಕ ಸಾರಿಗೆ ಅಧಿಕಾರಿಗಳು 5ರಿಂದ 10ಸಾವಿರ ರೂಪಾಯಿವರೆಗೆ ದಂಡ ವಿಧಿಸಿದರೆ, ರಾಜಧನ ನೀಡದೇ ಸಾಗಣೆ ಮಾಡುತ್ತಿದ್ದ ವಾಹನಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 25 ಸಾವಿರದವರೆಗೆ ದಂಡ ವಿಧಿಸಿದರು.

ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಎಚ್.ಬಿ. ಮಲ್ಲೇಶ್, ಪಿಎಸ್‌ಐ ಕೆ. ರಾಮರೆಡ್ಡಿ, ಒಡೆಯರ್, ವೆಂಕಟೇಶ್, ಆರ್‌ಟಿಒ ಅಧಿಕಾರಿ ಅಶೋಕ್ ರೆಡ್ಡಿ ಮತ್ತಿತರರು ದಾಳಿಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.