ADVERTISEMENT

ಅಕ್ರಮ ಮರಳು ಸಾಗಾಟ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 19:30 IST
Last Updated 11 ಏಪ್ರಿಲ್ 2011, 19:30 IST
ಅಕ್ರಮ ಮರಳು ಸಾಗಾಟ ತಡೆಗೆ ಮನವಿ
ಅಕ್ರಮ ಮರಳು ಸಾಗಾಟ ತಡೆಗೆ ಮನವಿ   

ಚಳ್ಳಕೆರೆ:  ತಾಲ್ಲೂಕಿನ ತೊರೆಬೀರನಹಳ್ಳಿ ವೇದಾವತಿ ನದಿ ಪಾತ್ರದಲ್ಲಿರುವ ದಲಿತರ ಜಮೀನುಗಳ ಆಸುಪಾಸಿನಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಈ ದಂಧೆಕೋರರು ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ದಲಿತರು ಸೋಮವಾರ ಸ್ಥಳೀಯ ತಹಶೀಲ್ದಾರ್‌ಗೆ ದೂರು ಸಲ್ಲಿಸಿದರು.ಮರಳನ್ನು 15 ವರ್ಷಗಳಿಂದ ಅಕ್ರಮವಾಗಿ, ಕಾನೂನಿನ ಹೆದರಿಕೆ ಇಲ್ಲದೇ ಸಾಗಾಣಿಕೆ ಮಾಡಲಾಗುತ್ತಿದ್ದು, ಇದೀಗ ದಲಿತರ ಜಮೀನುಗಳಿಗೂ ಕೈಹಾಕಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಯತ್ನಿಸಿದ ದಲಿತರನ್ನು ಬಾಯಿಗೆ ಬಂದಂತೆ ನಿಂದಿಸಿ ಮಾನಸಿಕವಾಗಿ ನೋವುಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಗ್ರಾಮದ ಮೇಲ್ಜಾತಿಯ ಬಲಿಷ್ಠರು ದಿನಕ್ಕೆ ಹತ್ತಾರು ಲಾರಿಗಳಲ್ಲಿ ಬೇರೆಡೆಗೆ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದರೂ ತಾಲ್ಲೂಕು ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಮುಖಂಡ ಮಂಜುನಾಥ್ ಮಾತನಾಡಿ, ಕಳೆದ ಶನಿವಾರ ರಾತ್ರಿ ದಲಿತರ ಜಮೀನುಗಳ ಹತ್ತಿರ ಅಕ್ರಮವಾಗಿ ಮರಳು ತುಂಬುತ್ತಿದ್ದವರನ್ನು ಪ್ರಶ್ನಿಸಿದಾಗ, ಹಲ್ಲೆಗೆ ಯತ್ನಿಸಿ ದೌರ್ಜನ್ಯದ ಮಾತುಗಳಿಂದ ನಿಂದಿಸಿದ್ದಾರೆ. ಇಂತಹವರ ವಿರುದ್ಧ ತಾಲ್ಲೂಕು ಆಡಳಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತರ ಜಮೀನುಗಳಲ್ಲಿ ಅಕ್ರಮವಾಗಿ ಮರಳು ತುಂಬುವುದನ್ನು ತಡೆಯಲು ಯತ್ನಿಸಿದವರ ಮೇಲೆ ಜೀವಭಯ ಇರುವ ಕಾರಣ ಇಲ್ಲಿನ ದಲಿತರಿಗೆ ರಕ್ಷಣೆ ಒದಗಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಅಲ್ಕೂರ ಬೋವಿ ಮಾತನಾಡಿ, ತೊರೆಬೀರನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಿ, ದಲಿತರನ್ನು ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ದುರುಗಪ್ಪ, ದ್ಯಾಮಣ್ಣ, ಶ್ರೀನಿವಾಸ, ರಾಮಪ್ಪ, ಹನುಮಂತರಾಯ, ಹೊನ್ನೂರಪ್ಪ ಮುಂತಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.