ADVERTISEMENT

ಅಡಿಕೆ ಎಲೆ ರೋಗ-ಕೇಂದ್ರಕ್ಕೆ ನಿಯೋಗ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 16:35 IST
Last Updated 5 ಫೆಬ್ರುವರಿ 2011, 16:35 IST

ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಗೆ ತಗುಲಿರುವ ಹಳದಿ ಎಲೆರೋಗಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರದ ಮುಂಗಡಪತ್ರಕ್ಕೂ ಮುನ್ನ ಈ ಭಾಗದ ಶಾಸಕರನ್ನೊಳಗೊಂಡ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ತಾಲ್ಲೂಕಿನ 300 ಮೀನುಗಾರ ಕುಟುಂಬಗಳಿಗೆ ಶಾಸಕರು ಕೋರಿರುವಂತೆ ಪುನರ್ವಸತಿ ಕಲ್ಪಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

ರಾಜಭವನಕ್ಕೆ ಹೋಗುವುದು, ಪತ್ರಿಕಾಗೋಷ್ಠಿ ನಡೆಸುವುದರಲ್ಲೇ ಕಾಲ ಕಳೆಯುತ್ತಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿರುವ ಜೆಡಿಎಸ್ ಕೊನೆಯ ದಿನಗಳನ್ನು ಎಣಿಸುತ್ತಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಹಗರಣಗಳಲ್ಲಿ ಸಿಲುಕಿ ನಲುಗುತ್ತಿದ್ದರೆ, ರಾಜ್ಯದಲ್ಲಿ ಮುಳುಗುವ ಹಡಗಾಗಿದೆ ಎಂದು ಛೇಡಿಸಿದರು.

ಗುಡಿಸಲು ವಾಸಿಗಳ ಪಟ್ಟಿ ಸಿದ್ಧಪಡಿಸಿದ್ದು, ಬಸವ ಇಂದ್ರ ಯೋಜನೆಯಡಿ 2000 ಮನೆ ಮಂಜೂರು ಮಾಡಲಾಗಿದೆ  ಎಂದು ಶಾಸಕ ಡಿ. ಎನ್.ಜೀವರಾಜ್ ಘೋಷಿಸಿದರು. ಬಿಜೆಪಿ ತಾಲ್ಲೂಕು  ಅಧ್ಯಕ್ಷ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಶಾಸಕ ಲಕ್ಷ್ಮಿನಾರಾಯಣ್, ಬಿಜೆಪಿ ಹೋಬಳಿ ಘಟಕ ಅಧ್ಯಕ್ಷ ಮನು, ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.