ADVERTISEMENT

ಅನುಮತಿ ಇಲ್ಲದೆ ರಕ್ಷಿತ ಅರಣ್ಯದಲ್ಲಿ ಚಾರಣ: 21 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಸಕಲೇಶಪುರ: ತಾಲ್ಲೂಕಿನ ಪಶ್ಚಿಮಘಟ್ಟದ ಕಬ್ಬಿನಾಲೆ ರಕ್ಷಿತ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡದ 13 ವಿದ್ಯಾರ್ಥಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಇವರಲ್ಲದೆ ಬೆಂಗಳೂರಿನಿಂದ ಚಾರಣಕ್ಕಾಗಿ ಬಂದು ಅನುಮತಿ ಇಲ್ಲದೆ ಅರಣ್ಯ ಪ್ರವೇಶಿಸಿದ್ದ ಎಂಟು ಮಂದಿ ಎಂಜಿನಿಯರ್‌ಗಳ ತಂಡವನ್ನೂ ಪೊಲೀಸರು ಬಂಧಿಸಿದ್ದಾರೆ.

ಎಲ್ಲ 21 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಬಿ.ಎಂ.ಎಸ್ ಕಾಲೇಜಿನ 14 ವಿದ್ಯಾರ್ಥಿಗಳ ತಂಡ ಶನಿವಾರ ಗುಂಡ್ಯ ಪ್ರದೇಶದಿಂದ ಅರಣ್ಯ ಪ್ರವೇಶಿಸಿತ್ತು. ಕಾಡಿನೊಳಗೆ ನದಿಯಲ್ಲಿ ಆಟವಾಡುತ್ತಿದ್ದಾಗ ಇವರ ತಂಡದ ನವೀನ್ ಕುಮಾರ್ ಎಂಬ ವಿದ್ಯಾರ್ಥಿ ನೀರಿನಲ್ಲಿ ಬಿದ್ದು ಪ್ರಾಣಕಳೆದುಕೊಂಡಿದ್ದ.

ಸೋಮವಾರ ಮೃತ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ತಂಡದಲ್ಲಿದ್ದ ಅವಿನಾಶ್, ಲಿಖಿತ್, ಆಕಾಶ್, ಅಭಯ್ ಕೀರ್ತಿ, ಅಮಿತ್, ಅವಿನಾಶ್, ಸ್ವಪ್ನೀಲ್, ಪ್ರಾರ್ಥನಾ ನರೇಂದ್ರ, ಪ್ರಾರ್ಥನಾ, ಹೇಮ, ಶರಣ್ಯ, ಸ್ವರೂಪ್ ಹಾಗೂ ನವೀನ್ ಅವರನ್ನು 1963ರ ಅರಣ್ಯ ಕಾಯಿದೆ ಸೆಕ್ಷನ್ 24 ಉಲ್ಲಂಘನೆ ಆರೋಪದಲ್ಲಿ ದೂರು ದಾಖಲಿಸಲಾಯಿತು.

ಪೊಲೀಸರು ಈ ವಿದ್ಯಾರ್ಥಿಗಳನ್ನು ಕಾಡಿನಿಂದ ಕರೆತರಲು ಹೋಗುತ್ತಿದ್ದರೆ ಎಂಟು ಮಂದಿ ಎಂಜಿನಿಯರ್‌ಗಳ ತಂಡವೂ ಕಾಡಿನಲ್ಲಿ ಪತ್ತೆಯಾಯಿತು. ಅವರನ್ನು ವಿಚಾರಿಸಿದಾಗ ತಾವು ಮೂಡಿಗೆರೆ ತಾಲ್ಲೂಕು ಬೈರಾಪುರದಿಂದ ಟ್ರೆಕ್ಕಿಂಗ್ ಆರಂಭಿಸಿದ್ದಾಗಿ ಅವರು ಮಾಹಿತಿ ನೀಡಿದರು. ಬೈರಾಪುರದವರೆಗೆ ವಾಹನದಲ್ಲಿ ಬಂದಿದ್ದ ಎಂಜಿನಿಯರ್‌ಗಳು ಅಲ್ಲಿಂದ ಟ್ರೆಕ್ಕಿಂಗ್ ಆರಂಭಿಸಿ ವಾಹನವನ್ನು ಗುಂಡ್ಯಕ್ಕೆ ಬರುವಂತೆ ಹೇಳಿದ್ದರು.

ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಶ್ರೀಕಾಂತ್, ಬಸವರಾಜ್ ಗೌಡರ್, ವಿ.ದೀಪು, ಚೈತನ್ಯ, ಸುರೇಂದ್ರನಾಥ್, ಸಂಪತ್ ಕುಮಾರ್, ದಕ್ಷಿಣಾಮೂರ್ತಿ ಹಾಗೂ ಸಿದ್ದಲಿಂಗೇಶ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಬಂಧಿತರನ್ನು ಇಲ್ಲಿಯ ಸಿವಿಲ್ ಜಡ್ಜ್ ಕಿರಿಯ ಶ್ರೇಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಎಂಜಿನಿಯರ್‌ಗಳಿಗೆ 2 ಸಾವಿರ ರೂಪಾಯಿ ನಗದು ಹಾಗೂ 5 ಸಾವಿರ ರೂಪಾಯಿ ಬಾಂಡ್ ಪಡೆದು ಜಾಮೀನು ನೀಡಲಾಯಿತು.

ಮೃತ ದೇಹ ಪತ್ತೆ:
ಕಬ್ಬಿನಾಲೆ ರಕ್ಷಿತ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಶನಿವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿದ್ದ ನವೀನ್ ಕುಮಾರ್ ಮೃತದೇಹ 48 ಗಂಟೆಗಳ ನಂತರ ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಪತ್ತೆಯಾಗಿದೆ. ಭಾನುವಾರ ಶೋಧನೆ ನಡೆಸಿದ, ನೆಲ್ಯಾಡಿ, ಗುಂಡ್ಯ ಹಾಗೂ ಉಪ್ಪಿನಂಗಡಿಯ 15 ಮಂದಿ ಈಜುಗಾರರ ತಂಡ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ನಡೆಸಿದಾಗ, ನೀರಿನ ಹೊಂಡದ ಒಳಗೆ ಬೇರಿನಲ್ಲಿ ಮೃತ ದೇಹ ಸಿಕ್ಕಿಹಾಕಿಕೊಂಡಿದ್ದನ್ನು ಪತ್ತೆ ಹಚ್ಚಿದರು.

ಮಾನವೀಯತೆ ಮರೆತರು:
ಬಂಧನಕ್ಕೊಳಗಾದ 13 ವಿದ್ಯಾರ್ಥಿಗಳ ಪಾಲಕರು ನ್ಯಾಯಾಲಯದಲ್ಲಿ ತಮ್ಮ ಮಕ್ಕಳ ಕೃತ್ಯಕ್ಕೆ ಕ್ಷಮೆ ಯಾಚಿಸಿ ತಮ್ಮ ಮಕ್ಕಳನ್ನು ಬಿಡಿಸಿಕೊಂಡು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ತಮ್ಮ ಮಕ್ಕಳ ಜತೆಯಲ್ಲೇ ಬಂದಿದ್ದ ನವೀನ್ ಕುಮಾರ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಲೂ ಸಹ ಇವರು ನಿಂತಿರಲಿಲ್ಲ. ಸಂಜೆ ವೇಳೆಗೆ ಶವವನ್ನು ಆಸ್ಪತ್ರೆಗೆ ತಂದಾಗ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮೃತ ಬಾಲಕನ ಕುಟುಂಬದವರು ಮಾತ್ರ ಇದ್ದರು. ಈ ಬಗ್ಗೆ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.