ಗುಲ್ಬರ್ಗ: ಗೋದೂಳಿ ಸಮಯ. ನಭೋಮುಖಿಯಾದ ನಂದಿಕೋಲು. ಸೂಜಿ ಬಿದ್ದರೂ ನೆಲ ಮುಟ್ಟದಷ್ಟು ಜನ, ಜನ, ಜನವೋ ಜನ. ಕಣ್ಣು ಹಾಯಿಸಿದಲ್ಲೆಲ್ಲ ಕಡುಕೆಂಪು, ಹಳದಿ ವರ್ಣದ ಪೇಟ ತೊಟ್ಟ ಹಿರಿಯರು, ಗಾಂಧಿ ಟೋಪಿಯ ರೈತರು, ಕನಕಾಂಬರ, ಮಲ್ಲಿಗೆ ಮುಡಿದ ಮಹಿಳೆಯರು... ಮುಗಿಲು ಮುಟ್ಟುವಂಥ ಜಯಕಾರ ‘ಶರಣಬಸವೇಶ್ವರ ಮಹಾರಾಜ್ ಕಿ ಜೈ’. ಗುಲ್ಬರ್ಗದ ಅಪ್ಪನ ಗುಡಿಯ ಮೇಲಿನ ಸುವರ್ಣ ಖಚಿತ ಗೋಪುರ ಸೂರ್ಯನ ಕಿರಣಗಳೊಂದಿಗೆ ಮಿನುಗುವಲ್ಲಿ ಪೈಪೋಟಿಗೆ ಇಳಿದಿದ್ದವು.
ಗುರುವಾರ ಸಂಜೆ ಗುಲ್ಬರ್ಗದ ಶರಣಬಸವೇಶ್ವರ 189ನೆಯ ತೇರು ಮಹೋತ್ಸವ. ಅಪ್ಪನ ಗುಡಿಯೆಂದೇ ಪ್ರಸಿದ್ಧವಾದ ಗುರು ಶಿಷ್ಯ ಪರಂಪರೆಯ ಶರಣಬಸವೇಶ್ವರ ಗುಡಿ ಆವರಣದಲ್ಲಿ ಭಕ್ತರ ಸಾಗರ. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವೇಶ್ವರ ಅಪ್ಪ ಶಂಖನಾದ ಮಾಡಿದರು. ನೆರೆದ ಭಕ್ತರ ಕಂಗಳು ಅಪ್ಪನ ಕಡೆಗೇ ಹೊರಳಿದವು. ಆಗ ಕೊರಳಿಗೆ ಹಾಕಿಕೊಂಡಿದ್ದ ಕೆಂಪು ಕೈ ಚೀಲದಿಂದ ಮಿರಮಿರನೆ ಮಿಂಚುವ ಬೆಳ್ಳಿ ಬಟ್ಟಲನ್ನು ಭಕ್ತರತ್ತ ಎತ್ತಿ ತೋರಿದರು.
ತಾವು ನಿಂತ ಪೀಠದಿಂದಲೇ ನಾಲ್ಕು ದಿಕ್ಕಿಗೂ ಬಟ್ಟಲನ್ನು ತೋರಿಸಿದರು. ಇದಕ್ಕೆ ಪರುಷ ಬಟ್ಟಲು ಎಂದೂ ಕರೆಯುತ್ತಾರೆ. ಕಾತರದಿಂದ ಕಾಯುತ್ತಿದ್ದ ಭಕ್ತರ ಉತ್ಸಾಹದ ಮೇರೆ ಮೀರಿತು. ಭಕ್ತಸಮೂಹ ಭಕ್ತಿಯ ಪರಾಕಾಷ್ಠೆಯಲ್ಲಿ ಅಪ್ಪನ ತೇರಿನ ಹಗ್ಗವನ್ನು ಹಿಡಿದೆಳೆಯ ತೊಡಗಿದರು. ಪಶ್ಚಿಮ ದಿಕ್ಕಿನಿಂದ ಪೂರ್ವದತ್ತ ರಾಜಗಾಂಭೀರ್ಯದಿಂದ, ಠೀವಿಯಿಂದ ತೇರು ಸಾಗಿತು. ನೆರೆದ ಜನರು ಬಾಳೆ, ಉತ್ತುತ್ತಿ, ವೀಳ್ಯದೆಲೆಗಳನ್ನು ಒಟ್ಟಾಗಿ ಸೇರಿಸಿ ನಾರಿನಿಂದ ಕಟ್ಟಿದ ಕಟ್ಟನ್ನು ತೇರಿನತ್ತ ತೂರಿದರು.
ನೆರೆಯ ರಾಜ್ಯಗಳಿಂದ ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಗುಲ್ಬರ್ಗದ ನಾಗರಿಕರು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದರು. ಭಜನಾ ಗುಂಪುಗಳು, ಡೊಳ್ಳು ಕುಣಿತ ಇವೆಲ್ಲ ಭಕ್ತರ ಕೈಗೆ ಕಸುವು ತುಂಬಿದವು. ತೇರು ಎಳೆಯುವವರೆಗೂ ಉಪವಾಸ ಆಚರಿಸಿ ಹರಕೆ ಸಲ್ಲಿಸುವ ಭಕ್ತ ವೃಂದ ಆನಂತರ ಅಲ್ಲಲ್ಲಿಯೇ ಬುತ್ತಿ ಬಿಚ್ಚಿ ಊಟ ಮಾಡಿದರು. ದಾಸೋಹಿಯ ಅಂಗಳದಲ್ಲಿ ಅಹಂ ಮರೆತು, ಸೋಹಂ ಸಹ ಮರೆತು, ಕೇವಲ ದಾಸೋಹವೊಂದೇ ಪರಿಸರದ ತುಂಬ ಹರಡಿತು. ಎಲ್ಲರೂ ಎಲ್ಲರಿಗೂ ತುತ್ತನ್ನು ಹಂಚುತ್ತ ಊಟ ಮಾಡುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.