ADVERTISEMENT

ಆರೋಗ್ಯಭಾಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಗಂಗಾವತಿ: ಮನುಷ್ಯ ಬೇರೆಲ್ಲ ಸಂಪತ್ತು ಸಾಧಿಸಬಹುದು. ಅದರೆ ಅನಾರೋಗ್ಯ ಪೀಡಿತ ವ್ಯಕ್ತಿ ಏನನ್ನೂ ಸಾಧಿಸಲಾರ. ಆರೋಗ್ಯಭಾಗ್ಯಕ್ಕಿಂತ ಮಿಗಿಲಾದ ಬೇರೊಂದು ಭಾಗ್ಯವಿಲ್ಲ ಎಂದು ಸಂಸದ ಎಸ್. ಶಿವರಾಮಗೌಡ ಹೇಳಿದರು.

ನಗರದ ಕೊಟ್ಟೂರೇಶ್ವರ ಕಾಲೇಜು ಮೈದಾನದಲ್ಲಿ ನಡೆಯ್ತುತಿರುವ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಧರ್ಮೋತ್ತೇಜಕ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ದುಶ್ಚಟಗಳಿಗೆ ಮತ್ತು ಅದರಿಂದ ಎದುರಾಗುವ ಕಾಯಿಲೆಗಳಿಗೆ ಹಣವನ್ನು ವ್ಯರ್ಥ ಮಾಡುತ್ತೇವೆ. ಕಾಯಿಲೆ ಬೀಳುವ ಮುನ್ನವೇ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹಾಯಿಸಿದರೆ ಸಾಕು ಅದೇ ನಮ್ಮನ್ನು ರಕ್ಷಿಸುತ್ತದೆ ಎಂದರು.

ಜಿಲ್ಲೆಯಲ್ಲಿನ ಅನಕ್ಷರಸ್ಥರ ಪ್ರಮಾಣ, ಆರೋಗ್ಯ ಜಾಗೃತಿಯ ಕೊರತೆ ಹಾಗೂ ಅಧಿಕ ಸಕ್ಕರೆ, ರಕ್ತದೊತ್ತಡ ಬಾಧಿತರ ಹಿನ್ನೆಲೆ ಶಿಫಾರಸು ಮಾಡಿದ್ದೆ. ಆದರೆ ರಾಜಕೀಯ ಪ್ರಭಾವಕ್ಕೊಳಗಾದ ಸಚಿವರು, ಶಿವಮೊಗ್ಗ, ಕೋಲಾರ ಆಯ್ದುಕೊಂಡರು ಎಂದು ಸಂಸದ ದೂರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸದೃಢ ಆರೋಗ್ಯ ಕಾಪಾಡಿಕೊಳ್ಳುವುದೇ ಮಹಾ ತಪ್ಪಸ್ಸು ಮಾಡಿದಷ್ಟು ಸಾಧನೆ ಎಂದು ಹಿರಿಯರು ಹೇಳಿದಂತೆ, ಆರೋಗ್ಯವಂತವರು ಮಾತ್ರ ಎಲ್ಲ ಚಟುವಟಿಕೆಯಲ್ಲಿ ಲವಲವಿಕೆಯಿಂದ ಇರಬಲ್ಲರು ಎಂದರು.

ಸಾನ್ನಿಧ್ಯ ವಹಿಸಿದ್ದ ಕಲ್ಮಠ ಡಾ. ಕೊಟ್ಟೂರು ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಮಾತನಾಡಿದರು. ಮಂಜುನಾಥ, ಪ್ರಭಾಕರ, ಚನ್ನಬಸಯ್ಯ ಸ್ವಾಮಿ, ರುದ್ರಗೌಡ, ಅಶೋಕಸ್ವಾಮಿ ಹೇರೂರು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.