ADVERTISEMENT

ಆರ್‌ಟಿಪಿಎಸ್‌ನಲ್ಲಿ ಬೆಂಕಿ ಆಕಸ್ಮಿಕ: ಗಾಯಾಳು ಸಾವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ರಾಯಚೂರು: ಇಲ್ಲಿನ ಆರ್‌ಟಿಪಿಎಸ್‌ನ 2ನೇ ಘಟಕದ ಬಾಯ್ಲರ್ ಕೆಳಭಾಗದಲ್ಲಿರುವ ಬೂದಿ ತೆಗೆಯುವ (ಬಾಟಮ್ ಸ್ಲ್ಯಾಗ್) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಂಡ ಮುಚ್ಚಿದ ಬೂದಿ ಮಿಶ್ರಿತ ಕೆಂಡ ಸಿಡಿದು ತೀವ್ರ ಗಾಯಗೊಂಡು ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕ ಜಿಂದಾವಲಿ ಗುರುವಾರ ಮೃತಪಟ್ಟರು.

ಅ. 12ರಂದು ಮುಂಜಾನೆ ಜಿಂದಾವಲಿ ಆರ್‌ಟಿಪಿಎಸ್‌ನ 2ನೇ ಘಟಕಕ್ಕೆ ಕೆಲಸಕ್ಕೆ ತೆರಳಿದ್ದರು. 8ರ ವೇಳೆಗೆ 2ನೇ ಘಟಕದ ಬಾಯ್ಲರ್‌ನ ಕೆಳಭಾಗದಲ್ಲಿರುವ ಬಾಟಮ್ ಸ್ಲ್ಯಾಗ್ ವಿಭಾಗದಲ್ಲಿ ಬೂದಿಮಿಶ್ರಿತ ಕೆಂಡ ಸಿಡಿದಿತ್ತು. ಇದರಿಂದ ಗುತ್ತಿಗೆ ಕಾರ್ಮಿಕರಾದ ಜಿಂದಾವಲಿ ಹಾಗೂ ಆರ್‌ಟಿಪಿಎಸ್ ನೌಕರ ನರಸಪ್ಪ ತೀವ್ರವಾಗಿ ಗಾಯಗೊಂಡಿದ್ದರು.

ಇವರಿಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ 90ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಜಿಂದಾವಲಿ ಆಸ್ಪತ್ರೆಯಲ್ಲಿ ಮೃತರಾದರು.

ಜಿಂದಾವಲಿ ಮೂಲತಃ ಜೇಗರಕಲ್ ಗ್ರಾಮದವರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ನಿತ್ಯ ಜೇಗರಕಲ್ ಗ್ರಾಮದಿಂದ ದ್ವಿಚಕ್ರವಾಹನದಲ್ಲಿ ಆರ್‌ಟಿಪಿಎಸ್‌ಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಆಗಮಿಸುತ್ತಿದ್ದರು.

ಅಧಿಕಾರಿಗಳ ಭರವಸೆ
: ಕುಟುಂಬ ವರ್ಗಕ್ಕೆ ನಿಯಮಾನುಸಾರ ಪರಿಹಾರ ಕಲ್ಪಿಸಲಾಗುವುದು. ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಬೇಡಿಕೆ ಇದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಬೇಡಿಕೆಗೆ ಸ್ಪಂದಿಸುವ ಕಾರ್ಯ ಮಾಡುತ್ತೇವೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.