ADVERTISEMENT

ಆಸ್ಪತ್ರೆಗೆ ಬೇಕಿದೆ ಶಸ್ತ್ರಚಿಕಿತ್ಸೆ!

ಎಂ.ಶಿವಮಾದು ದಶವಾರ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಚನ್ನಪಟ್ಟಣ: ನೂರು  ಹಾಸಿಗೆಗಳ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಆಸ್ಪತ್ರೆಯ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಸಾರ್ವಜನಿಕರಿಗೆ ನೀಡಿದ್ದ ಭರವಸೆ ಸಹ ಹುಸಿಯಾಗಿದೆ. ಪರಿಣಾಮವಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಸೂಕ್ತ ಚಿಕಿತ್ಸೆಯಿಲ್ಲದೇ ಪರದಾಡುತ್ತಿದ್ದಾರೆ.

‘ಡಿ’ ಗ್ರೂಪ್ ಸಿಬ್ಬಂದಿಗಳ ಕೊರತೆಯಿಂದಾಗಿ ಆಸ್ಪತ್ರೆ ಸ್ವಚ್ಛತೆ ಕಳೆದುಕೊಂಡಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹತ್ತು ಮಂದಿ ‘ಡಿ’ ಗ್ರೂಪ್ ನೌಕರರನ್ನು  ಕರ್ತವ್ಯಕ್ಕೆ ನಿಯೋಜಿಸುವಲ್ಲಿ ವಿಫಲರಾಗಿರುವ ಶುಶ್ರೂಷಕ ಅಧೀಕ್ಷಕರು ಸಮಸ್ಯೆ ಮತ್ತಷ್ಟು ಉಲ್ಪಣಗೊಳ್ಳಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಈ ಆಸ್ಪತ್ರೆಗೆ ಸರ್ಕಾರ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಸೇರಿದಂತೆ ಮಂಜೂರು ಮಾಡಿರುವ ಒಟ್ಟು ಹುದ್ದೆ 94. ಈ ಪೈಕಿ ಹಾಲಿ 59 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 35 ಹುದ್ದೆ ಖಾಲಿ ಬಿದ್ದಿವೆ. ದೀರ್ಘಕಾಲದಿಂದಲೂ ಖಾಲಿಯಿದ್ದ ಶಸ್ತ್ರ ಚಿಕಿತ್ಸಕರ ಹುದ್ದೆಗೆ 8 ತಿಂಗಳ ಹಿಂದೆ ವೈದ್ಯರ ನೇಮಕವಾಗಿದೆ. ಆ ವೈದ್ಯರು ರೋಗಿಗಳ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಎರಡು ಸಾಮಾನ್ಯ ಫಿಸಿಷಿಯನ್ ಹುದ್ದೆಯ ಪೈಕಿ ಒಂದು ಹುದ್ದೆಯನ್ನು ಈವರೆಗೂ ಭರ್ತಿ ಮಾಡದಿರುವುದರಿಂದ ಇರುವ ಏಕೈಕ ಫಿಸಿಷಿಯನ್ ಡಾ.ಜನಾರ್ದನ್ ಅವರೇ ದಿನದ 24ಗಂಟೆಯೂ ಕರ್ತವ್ಯ ನಿರ್ವಹಿಸಿ 300ಕ್ಕೂ ಹೆಚ್ಚು ಹೊರ ಹಾಗೂ 50ಕ್ಕೂ ಹೆಚ್ಚು ಒಳರೋಗಿಗಳ ಆರೋಗ್ಯ ತಪಾಸಣೆ ಮಾಡಬೇಕಾದ ಒತ್ತಡ ಎದುರಿಸುತ್ತಿದ್ದಾರೆ.ಮೂಳೆತಜ್ಞ ಡಾ. ಮಂಜುನಾಥ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು ಅಮಾನತು ಗೊಂಡಿದ್ದರಿಂದ ಆ ಹುದ್ದೆ ಖಾಲಿ ಇದೆ.

ಸದ್ಯ ಆಸ್ಪತ್ರೆಯಲ್ಲಿ ಮೂಳೆ ತಜ್ಞರೇ ಇಲ್ಲ. ಪ್ರಸೂತಿ ತಜ್ಞೆ ಡಾ. ಪದ್ಮಿನಿ ಅವರಿಗೆಅಪಘಾತವಾಗಿರುವುದರಿಂದ 5 ತಿಂಗಳು  ರಜೆ ಮೇಲೆ ತೆರಳಿದ್ದಾರೆ. ಇದರಿಂದಾಗಿ ಹೆರಿಗೆ  ವಾರ್ಡ್ ಕೂಡ ‘ದಾದಿ’ಯರ ಉಸ್ತುವಾರಿಯಲ್ಲಿದೆ. ಹೀಗಾಗಿ ಪ್ರಸವಕ್ಕೂ ಮುನ್ನವೇ ಬಡ ಗರ್ಭಿಣಿಯರು ‘ಬೇರೆ’ಯದೇ ನೋವು ಅನುಭವಿಸುವಂತಾಗಿದೆ !

ಇದೀಗ ಸರ್ಕಾರ  ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೇತ್ರತಜ್ಞೆ ಹಾಗೂ ಇಎನ್‌ಟಿ ತಜ್ಞೆ ಇಬ್ಬರನ್ನೂ ವರ್ಗಾವಣೆ ಮಾಡಿದೆ. ಪರಿಣಾಮವಾಗಿ ಒಬ್ಬ ಫಿಸಿಷಿಯನ್, ಮಕ್ಕಳ ತಜ್ಞರು, ರೇಡಿಯೋಲಾಜಿ ತಜ್ಞೆ, ಆಯುಷ್ ವೈದ್ಯೆ, ದಂತ ವೈದ್ಯ, ಯುನಾನಿ ವೈದ್ಯರು ಮಾತ್ರ ಉಳಿದಿದ್ದಾರೆ. ಸ್ವಯಂ ಪ್ರಸೂತಿ ತಜ್ಞರೂ ಆಗಿರುವ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ ಶಸ್ತ್ರಚಿಕಿತ್ಸಕರು ಪ್ರಸೂತಿ ಶಸ್ತ್ರಚಿಕಿತ್ಸೆ ಕಡೆ ಗಮನಿಸುತ್ತಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.

ಹಿರಿಯ ತಜ್ಞ ವೈದ್ಯರಿಲ್ಲದೇ ಶಸ್ತ್ರಚಿಕಿತ್ಸಾ ಕೊಠಡಿಗೆ ಬೀಗ ಬಿದ್ದಿದೆ. ಆರು ತಿಂಗಳ ಹಿಂದೆ ದುರಸ್ತಿಗೆ ಒಯ್ಯಲ್ಪಟ್ಟ ಸ್ಕ್ಯಾನಿಂಗ್ ಯಂತ್ರ ಇಂದಿಗೂ ದುರಸ್ತಿಯಾಗಿಲ್ಲ. ರೋಗಿಗಳ ಅನುಕೂಲಕ್ಕೆ ಅಗತ್ಯವಿರುವ ಯಂತ್ರಗಳನ್ನು ತಂದಿರಿಸುವ ಬದಲಿಗೆ ಆಡಳಿತ ಕಚೇರಿಯ ಅಭಿವೃದ್ಧಿಗೆ ಭರ್ಜರಿ ಖರೀದಿಯ ಭರಾಟೆ ಎಗ್ಗಿಲ್ಲದೆ ಸಾಗಿದೆ.

ಇಂಥ ಅನೇಕ ಸಮಸ್ಯೆಗಳ ಕುರಿತು ವರ್ಷದ ಹಿಂದೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಸಾರ್ವಜನಿಕರು ದೂರಿನ ಸುರಿಮಳೆಯನ್ನೇ  ಸುರಿಸಿದ್ದರು. ಒಂದು ತಿಂಗಳಲ್ಲಿ ಎಲ್ಲವನ್ನು ಸರಿಪಡಿಸುವುದಾಗಿ ಅವರು ಭರವಸೆ ನೀಡಿದ್ದರು.

ಇದಾದ ನಂತರ ಶಸ್ತ್ರಚಿಕಿತ್ಸಕರನ್ನು ನೇಮಿಸಿದರೆ ವಿನಃ ಮೂಲಭೂತ ಸಮಸ್ಯೆಗಳತ್ತ ಗಮನ ನೀಡಿಲ್ಲ. ಅದೆಲ್ಲದರ ಪ್ರತಿಫಲವಾಗಿ ಸಾರ್ವಜನಿಕ ಆಸ್ಪತ್ರೆ ತಾಲ್ಲೂಕಷ್ಟೇ ಅಲ್ಲದೆ ಸುತ್ತಮುತ್ತಲ ತಾಲ್ಲೂಕಿನ ಬಡರೋಗಿಗಳ ಪಾಲಿಗೆ ‘ಇದ್ದೂ ಇಲ್ಲದಂತಾಗಿದೆ’.ಸರ್ಕಾರ ಹಾಗೂ ಆರೋಗ್ಯ ಸಚಿವರು ಈ ಕೂಡಲೇ ಮತ್ತೊಬ್ಬ ಫಿಸಿಷಿಯನ್, ಮೂಳೆ ಹಾಗೂ ಪ್ರಸೂತಿ ತಜ್ಞರನ್ನು ಅತ್ಯಗತ್ಯವಾಗಿ ನೇಮಿಸಬೇಕು. ಜೊತೆಗೆ ಆಸ್ಪತ್ರೆ ಸಮಸ್ಯೆ ಬಗೆಹರಿಸಿ ಬಡರೋಗಿಗಳ ಉಪಯೋಗಕ್ಕೆ ದೊರೆಕುವಂತೆ ಮಾಡದಿದ್ದಲ್ಲಿ ಸಾರ್ವಜನಿಕರು ಪ್ರತಿಭಟನೆ ಹಾದಿ ಹಿಡಿಯುವುದರಲ್ಲಿ ಎರಡು ಮಾತಿಲ್ಲ.


ಇರುವ ಸಮಸ್ಯೆ ಬಗೆಹರಿಸಿ
ಆಸ್ಪತ್ರೆಯ ಯಂತ್ರೋಪಕರಣಗಳ ಖರೀದಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿರುವ ಕೆಎಸ್‌ಐಸಿ ಅಧ್ಯಕ್ಷ ಸಿ.ಪಿ.ಯೋಗೇಶ್ವರ್ ಅವರು ಆಸ್ಪತ್ರೆಯನ್ನು 200 ಹಾಸಿಗೆಗಳೊಂದಿಗೆ ಮೇಲ್ದರ್ಜೆಗೇರಿಸುವ ಉತ್ಸಾಹ ತೋರಿದ್ದಾರೆ.

ಇರುವ ನೂರು ಹಾಸಿಗೆಗಳನ್ನೇ ಸಮರ್ಪಕವಾಗಿ ನಿರ್ವಹಿಸಲು ಸಿಬ್ಬಂದಿ ಕೊರತೆ ಇರುವಾಗ ಮೇಲ್ದರ್ಜೆಗೇರಿಸಿ ಏನು ಪ್ರಯೋಜನ? ಅದರ ಬದಲಾಗಿ ಸಿ.ಪಿ.ಯೋಗೇಶ್ವರ್ ಅವರು ಇಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳನ್ನು ಮೊದಲು ಬಗೆಹರಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೊಂದಿಲ್ಲ ಎಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.