ADVERTISEMENT

ಕನ್ನಡ ನುಡಿ ತೇರಿಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಕನ್ನಡ ನುಡಿ ತೇರಿಗೆ ಚಾಲನೆ ಇಂದು
ಕನ್ನಡ ನುಡಿ ತೇರಿಗೆ ಚಾಲನೆ ಇಂದು   

ಕೆಜಿಎಫ್: ಗಡಿ ಜಿಲ್ಲೆಗಳಲ್ಲಿ ಭಾಷಾ ಸೌಹಾರ್ದ ಮೂಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿ ರುವ ನುಡಿತೇರು ಉದ್ಘಾಟನೆಗೆ ನಗರ ಸಜ್ಜಾಗಿದೆ. ರಾಬರ್ಟ್‌ಸನ್‌ಪೇಟೆ ನಗರಸಭೆ ಮೈದಾನದಲ್ಲಿ ಮಂಗಳವಾರ ನುಡಿತೇರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ತಹಶೀಲ್ದಾರ್ ಎಸ್.ಎಂ.ಮಂಗಳಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಚಾಲಕ ಮಲ್ಲಿಕಾರ್ಜುನಯ್ಯ, ನಗರಸಭೆ ಅಧ್ಯಕ್ಷ ದಯಾನಂದ್, ಆಯುಕ್ತ ಬಾಲಚಂದ್ರ, ಕನ್ನಡ ಸಂಘ ಪದಾಧಿಕಾರಿಗಳು ಪೂರ್ವಸಿದ್ಧತೆ ಪರಿಶೀಲಿಸಿದರು. ಮೈದಾನವನ್ನು ನಗರಸಭೆ ವತಿಯಿಂದ ಸ್ವಚ್ಛಗೊಳಿಸಲಾಗಿದೆ. ಸುತ್ತಮುತ್ತಲಿನ ಕಂಬಗಳಿಗೆ ತ್ರಿವರ್ಣ ಬಳಿಯಲಾಗಿದೆ. ಸುಮಾರು ಐದು ಸಾವಿರ ಪ್ರೇಕ್ಷಕರು ಸಭಾಂಗಣದಲ್ಲಿ ಕುಳಿತು ಸಮಾರಂಭ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ ಎಂದು ಮಂಗಳಾ ತಿಳಿಸಿದರು.

ಕನ್ನಡ ಸಂಘದ ಪದಾಧಿಕಾರಿಗಳಾದ ಶೇಖರಪ್ಪ, ಮುರಳೀಧರರಾವ್, ಎನ್.ಆರ್.ಪುರುಷೋತ್ತಮ, ಕನ್ನಡ ಮಿತ್ರರು ಸಂಸ್ಥೆಯ ಲಕ್ಷ್ಮಣಕುಮಾರ್ ಪೂರ್ವಸಿದ್ಧತಾ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದರು.

ವೆಂಕಟರಮಣ ಸ್ವಾಮಿ ದೇವಾ ಲಯದ ಬಳಿಯಿಂದ ಬರುವ ಸಾಂಸ್ಕೃತಿಕ ತಂಡಗಳು ಮೆರವಣಿಗೆ ಮೂಲಕ ನಗರಸಭೆ ಮೈದಾನ ತಲುಪಲಿವೆ. ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

 ಮೆರವಣಿಗೆ ನಗರಸಭೆ ಮೈದಾನ ತಲುಪಿದ ಮೇಲೆ ಕಾರ್ಯಕ್ರಮ ಆರಂಭವಾಗುತ್ತದೆ. ಈ ವೇಳೆಗೆ ಮೂರು ತೇರುಗಳು ಬೆಮೆಲ್ ನಗರ ತಲುಪಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.