ADVERTISEMENT

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಎಚ್.ಡಿ.ಕೋಟೆ: ತಾಲ್ಲೂಕಿನ ಚಿಕ್ಕೆರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆಯೂರು ಗ್ರಾಮದ ರಾಮೇಗೌಡರ ಕಬ್ಬಿನಗದ್ದೆಯಲ್ಲಿ ಪತ್ತೆಯಾದ ಇನ್ನೂ ಕಣ್ಣುಬಿಡದ ಮೂರು ಚಿರತೆ ಮರಿಗಳನ್ನು ಪುನಃ ಅಲ್ಲಿಯೇ ಬಿಡಲಾಗಿದೆ.

ಒಂದೆರಡು ದಿನಗಳ ಹಿಂದಷ್ಟೆ ಜನಿಸಿದ ಮರಿಗಳ ಜೊತೆಯಲ್ಲಿ ಇದ್ದ ತಾಯಿ ಚಿರತೆಯು ಕಬ್ಬು ಕಟಾವು ಮಾಡುತ್ತಿದ್ದವರನ್ನು ನೋಡಿ ಕಬ್ಬಿನಗದ್ದೆಯಲ್ಲಿ ಕಣ್ಮರೆಯಾಯಿತು. ಕಟಾವು ಮಾಡುತ್ತಿದ್ದ ಕಾರ್ಮಿಕರು ಗದ್ದೆಯಲ್ಲಿ ಇದ್ದ ಮೂರು ಮರಿಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಹತ್ತಿರದಲ್ಲಿ ಇದ್ದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಮತ್ತು ಸುರೇಶ್ ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.

ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಆಗಮಿಸಿ ತಾಯಿ ಚಿರತೆ ತನ್ನ ಮರಿಗಳನ್ನು ಹುಡುಕಿ ಅದೇ ಸ್ಥಳಕ್ಕೆ ಬರುವುದು ಸಹಜ ಎಂದು ಹೇಳಿದ್ದರಿಂದ ಮರಿಗಳು ಇದ್ದ ಸ್ಥಳದಲ್ಲಿಯೇ ಬಿಡಲಾಯಿತು.
ಜಮೀನಿನ ಮಾಲೀಕ ರಾಮೇಗೌಡರ ಮನೆಯಲ್ಲಿ ಸಾಕಿದ್ದ ನಾಯಿಯೊಂದನ್ನು ಈಚೆಗೆ ಚಿರತೆ ಬಲಿ ತೆಗೆದುಕೊಂಡಿತ್ತು, ಅದರೂ ತಾಯಿ ಚಿರತೆಯ ಆರೈಕೆ ತನ್ನ ಮರಿಗಳಿಗೆ ಸಿಗಲಿ, ಅವೂ ಬದುಕಿಕೊಳ್ಳಲಿ ಎಂದು ಅವರು ತಮ್ಮ ತೋಟದಲ್ಲಿಯೇ ಮರಿಗಳನ್ನು ಬಿಡಲುಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.