ADVERTISEMENT

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಬೀದರ್:  ಜಿಲ್ಲೆಯ ವಿವಿಧೆಡೆ ಸಂಚರಿಸಲಿರುವ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್  ನ್ಯಾಯಾಧೀಶರಾದ ಡಾ. ಶಶಿಕಲಾ ಉರಣ್ಕರ್ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.

ಜನಸಾಮಾನ್ಯರಿಗೆ ಮನೆ ಬಾಗಿಲಿಗೆ ಕಾನೂನು ಸೇವೆ, ಈ ಕುರಿತು ಜಾಗೃತಿ ಮೂಡಿಸುವುದೇ ಕಾನೂನು ಸಾಕ್ಷರತಾ ರಥದ ಉದ್ದೇಶವಾಗಿದೆ ಎಂದರು.

ಜಿಲ್ಲೆಯಲ್ಲಿ ನಾಲ್ಕನೇ ಬಾರಿಗೆ ಕಾನೂನು ಸಾಕ್ಷರತಾ ರಥ ಸಂಚರಿಸುತ್ತಿದೆ. ಈ ಬಾರಿ ಪ್ರತಿ ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಸಂಚರಿಸಲಿದ್ದು, ಪ್ರತಿ ದಿನ ಮೂರು ಗ್ರಾಮಗಳನ್ನು ತಲುಪಲಿದೆ. ಜೂನ್ 7ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಕಾನೂನು ತಿಳಿವಳಿಕೆ ಎಲ್ಲರಿಗೂ ಅಗತ್ಯವಾಗಿದೆ. ಕಾನೂನು ಜಾಗೃತಿಯಿಂದ ಎಲ್ಲ ರೀತಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿಯಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಗಂದಗೆ ಹೇಳಿದರು.

ಕಾನೂನು ಸಾಕ್ಷರತಾ ರಥದ ಜೊತೆಗೆ ಜನತಾ ನ್ಯಾಯಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಸಾರ್ವಜನಿಕರು ರಥದ ಪ್ರಯೋಜನ ಪಡೆದಾಗ ಮಾತ್ರ ಇದರ ಉದ್ದೇಶ ಸಾಕಾರಗೊಳ್ಳಲಿದೆ ಎಂದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎನ್. ನಾಯಕ್, ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ರಾಮಚಂದ್ರ ಎನ್. ಲಂಬಾಣಿ, ಜಿಲ್ಲಾ ಸರ್ಕಾರಿ ವಕೀಲ ವಿಲಾಸರಾವ್ ಮೋರೆ ಇದ್ದರು.

ರಥವು ಗುರುವಾರ ಬೀದರ್ ತಾಲ್ಲೂಕಿನ ಕೈಲಾಸಪುರ, ಚಿಮಕೋಡ್ ಹಾಗೂ ಬಸಂತಪುರ ಗ್ರಾಮಗಳಲ್ಲಿ ಸಂಚರಿಸಿತು. ನೆರವು ಕೇಂದ್ರದ ವಕೀಲರಾದ ಮಲ್ಲಿಕಾರ್ಜುನ ಜಳಕೋಟೆ, ರಾಜಕುಮಾರ ಸ್ವಾಮಿ, ಬಿ.ಎಸ್. ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.