ADVERTISEMENT

ಕುಡಿಯುವ ನೀರಿಗೆ ತತ್ವಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ಕುಡಿಯುವ ನೀರಿಗೆ ತತ್ವಾರ: ಪ್ರತಿಭಟನೆ
ಕುಡಿಯುವ ನೀರಿಗೆ ತತ್ವಾರ: ಪ್ರತಿಭಟನೆ   

ನಾಗಮಂಗಲ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಜವರನಹಳ್ಳಿ ಗ್ರಾಮ ಪಂಚಾಯಿತಿ ಎದುರು ಮಹಿಳೆಯರು ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಜರುಗಿತು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿಂದಿನಿಂದಲೂ ಇದೆ. 2 ವರ್ಷಗಳಿಂದ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. 1 ತಿಂಗಳಿನಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ದೂರಿದರು.

ಜವರನಹಳ್ಳಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣ. ಕಲುಷಿತ ನೀರು ಕುಡಿದು ಗ್ರಾಮಸ್ಥರು ಆಸ್ಪತ್ರೆ ಹಾದಿ ಹಿಡಿದಿರುವ ನಿದರ್ಶನಗಳು ಕಣ್ಣ ಮುಂದಿದೆ. ಗ್ರಾಮದಲ್ಲಿ 2 ಕೊಳವೆ ಬಾವಿಗಳಿವೆ. ಆದರೆ, ಯಾವುದರಿಂದಲೂ ನೀರು ಬರುತ್ತಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಲ್.ಬೋರಯ್ಯ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು.

ನಂತರ ಮಾತನಾಡಿ, ಟ್ರಾನ್ಸ್‌ಫಾರ‌್ಮರ್ ಸುಟ್ಟು ಹೋದ ಪರಿಣಾಮ ನೀರು ಪೂರೈಸುವಲ್ಲಿ ವಿಳಂಬವಾಗಿದೆ. ಜನರೇಟರ್ ಬಳಸಿ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಟ್ರಾನ್ಸ್‌ಫಾರ‌್ಮರ್ ಅಳವಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಉಷಾ, ಗೀತಾ, ಪ್ರಭಾ ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು ಹಾಗೂ ಗ್ರಾಮದ ಯುವ ಮುಖಂಡರಾದ ದೇವರಾಜ, ಉಮೇಶ, ಆನಂದ, ಮನು, ನವೀನ, ವನರಾಜ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.