ADVERTISEMENT

ಕೃಷಿ ಸಚಿವರ ಹೇಳಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ಹಾವೇರಿ: ಜಿಲ್ಲೆಯಲ್ಲಿ `ಕನಕ~ ಬಿ.ಟಿ ಹತ್ತಿ ಬೀಜಕ್ಕಾಗಿ ಮಂಗಳವಾರ ನಡೆದ ನೂಕು ನುಗ್ಗಲಿನಲ್ಲಿ ರಾಜಕೀಯ ಕೈವಾಡವಿದೆ ಎಂಬ ಕೃಷಿ ಸಚಿವ ಉಮೇಶ ಕತ್ತಿ ಹೇಳಿಕೆಗೆ  ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕೃಷಿ ಸಚಿವರು ತಕ್ಷಣವೇ ತಮ್ಮ ಹೇಳಿಕೆ ವಾಪಸ್ಸು ಪಡೆದು ಜಿಲ್ಲೆಯ ರೈತರ ಕ್ಷಮೆ ಯಾಚಿಸಬೇಕು. ಇಲ್ಲವಾದರೆ, ಅವರನ್ನು ಜಿಲ್ಲೆಗೆ ಕಾಲಿಡದಂತೆ ನಿರ್ಬಂಧ ಹೇರಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚೆಳ್ಳರ ಹಾಗೂ ಗೌರವಾಧ್ಯಕ್ಷ ಶಿವಾನಂದ ಗುರುಮಠ ಎಚ್ಚರಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಜದ ಅಭಾವ ರೈತರ ನೂಕುನುಗ್ಗಲಿಗೆ ಕಾರಣವಾಗಿದೆ. ಅದನ್ನು ಮರೆಮಾಚಲು ರಾಜಕೀಯ ಕೈವಾಡವಿದೆ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ಸಚಿವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ರೈತರಿಗೆ ಅವಶ್ಯವಿರುವ ಬೀಜ ಹಾಗೂ ರಸಗೊಬ್ಬರವನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.