ನಾಪೋಕ್ಲು: ಕೊಡವ ರಾಜ್ಯ ರಚಿಸಲು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮೂರ್ನಾಡಿನ ಬಸ್ ನಿಲ್ದಾಣದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಲಾಯಿತು. ಒಂದು ಗಂಟೆಗಳ ಕಾಲ ಸಿಎನ್‌ಸಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು. ನಂತರ ಮಾತನಾಡಿದ ಸಿ.ಎನ್.ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಅವರು, ಕೊಡವ ರಾಜ್ಯ ರಚಿಸಬೇಕು ಎಂಬ ಹಕ್ಕೊತ್ತಾಯದ ಕೂಗನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಈ ರೀತಿಯ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೊಡವರು ಮೊದಲಿನಿಂದಲೂ ನಿರಂತರ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಕೊಡವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ದೊರಕುತ್ತಿಲ್ಲ. ನಾಡು-ನೆಲ-ಸಂಸ್ಕೃತಿ ಉಳಿಸುವುದರೊಂದಿಗೆ ಸಂವಿಧಾನ ಬದ್ಧವಾದ ಭದ್ರತೆಯನ್ನು ಕೊಡವರು ಕಲ್ಪಿಸಿಕೊಳ್ಳುವುದು ಅಗತ್ಯ. ಕೊಡವ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಕೊಡವ ರಾಜ್ಯವನ್ನು ರಚಿಸಬೇಕಾಗಿದೆ ಎಂದು ಹೇಳಿದರು.
ಕೊಡವರನ್ನು ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವೆಂದು ಪರಿಗಣಿಸಿ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಸಿಎನ್‌ಸಿಯ ಕಾರ್ಯಕರ್ತರಾದ ಚಂಬಾಂಡ ಜನತ್, ಬೇಪಡಿಯಂಡ ದಿನು, ಮಣವಟ್ಟೀರ ಶಿವಣಿ, ಚೀಯಕಪೂವಂಡ ಮನು, ಬೊಳಕಾರಂಡ ಸೋಮಯ್ಯ, ಅರೆಯಂಡ ಗಿರಿ, ಪಳಂಗಂಡ ಅಪ್ಪಣ್ಣ, ಪಳಂಗಂಡ ಲವಕುಮಾರ್, ವೇಣು ಅಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.