ADVERTISEMENT

ಖಾಲಿ ಹುದ್ದೆ ಭರ್ತಿಗೆ ಒತ್ತಾಯ; ಕಾರ್ಮಿಕರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: ತೋಟಗಾರಿಕೆಗೆ ಇಲಾಖೆಯಲ್ಲಿ ಖಾಲಿ ಇರುವ 9ಸಾವಿರ ಹುದ್ದೆಗಳ ಭರ್ತಿಗೆ ಸರಕಾರ ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿ ರಾಜ್ಯ ತೋಟಗಾರಿಕಾ ತರಬೇತುದಾರರ ಒಕ್ಕೂಟ ಮೈಸೂರಿನಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಬುಧವಾರ ನಗರಕ್ಕೆ ಆಗಮಿಸಿತು.

ತಾಲ್ಲೂಕಿನ ಜೆಡಿಎಸ್ ಮುಖಂಡ ಸಿಂ.ಲಿಂ. ನಾಗರಾಜು, ತಾಲ್ಲೂಕು ಪಂಚಾಯಿತಿ  ಸದಸ್ಯರಾದ ಮಾರೇಗೌಡ, ಚಿನ್ನಗಿರಿಗೌಡ, ಜನಪರ ವೇದಿಕೆ ಅಧ್ಯಕ್ಷ ಬೇವೂರು ಯೋಗೀಶ್ ಅವರು  ಪಾದಯಾತ್ರಿಗಳನ್ನು ಪಟ್ಟಣದಲ್ಲಿ ಸ್ವಾಗತಿಸಿದರು.

ಬಸ್ ನಿಲ್ದಾಣದ ವೃತ್ತದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮೂಗನಹುಂಡಿ ಯೋಗೀಶ್, 1987ರಿಂದ ಸೇವೆ ಸಲ್ಲಿಸುತ್ತಿರುವ ತೋಟಗಾರಿಕಾ ತರಬೇತುದಾರರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದು ಸರ್ಕಾರ ಈ ಕೂಡಲೇ ನಮಗೆ ಉದ್ಯೋಗ ಕಲ್ಪಿಸಬೇಕೆಂದು ಆಗ್ರಹಿಸಿದರು.

`ಈ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ~ ಎಂದರು.

ಸರ್ಕಾರ ಇನ್ನಾದರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಪಾದಯಾತ್ರೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಂಕೇಗೌಡ, ಖಜಾಂಚಿ ರಾಚಯ್ಯ, ಸಿ.ವಿ. ದ್ವಾರಕೀಶ್, ಕೆ. ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.