ADVERTISEMENT

ಗುಂಡಿ ಬಿದ್ದ ರಸ್ತೆ: ವಾಹನ ಸವಾರರ ಸಂಕಟ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST

ಚಿಕ್ಕಬಳ್ಳಾಪುರ: ಇಲ್ಲಿನ ಬಿ.ಬಿ.ರಸ್ತೆಯ ಕಂದವಾರ ಗ್ರಾಮ ತಿರುವು ಬಳಿ ಹಾದು ಹೋಗಿರುವ ರೈಲ್ವೆ ಹಳಿ ಮಧ್ಯದ ಜಾಗಗಳಲ್ಲಿ ಡಾಂಬರ್ ಕಿತ್ತುಹೋಗಿ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ರೈಲ್ವೆ ಮಾರ್ಗ ದಾಟುವಾಗ ಗಾಯಗೊಳ್ಳುವ ಘಟನೆ ಮೇಲಿಂದ ಮೇಲೆ ಸಂಭವಿಸುತ್ತಿದೆ.

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲಾಗಿರುವ ಈ ರೈಲು ಮಾರ್ಗದ ಮೂಲಕ ಪ್ರತಿನಿತ್ಯ ಚಿಕ್ಕಬಳ್ಳಾಪುರದಿಂದ ಧರ್ಮಪುರಿಯವರೆಗೆ ರೈಲು ಸಂಚರಿಸುತ್ತದೆ. ರೈಲು ಸಾಗುವ ವೇಳೆ ಗೇಟ್ ಮುಚ್ಚಲಾಗುತ್ತದೆ. ಗೇಟ್ ತೆರೆದಾಕ್ಷಣ ಒಂದೇ ಸಮನೆ ಮುಖಾಮುಖಿಯಾಗಿ ವಾಹನ ಸವಾರರು ಪ್ರಯಾಣ ಬೆಳೆಸಲು ಮುಂದಾಗುತ್ತಾರೆ. ಹೀಗೆ ದಾಟುವ ವೇಳೆ ಗುಂಡಿಯಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುತ್ತಾರೆ.

`ರೈಲ್ವೆ ಹಳಿಯು ರಸ್ತೆಗೆ ಸಮನಾಂತರವಾಗಿ ಇರಬೇಕು. ಹಳಿಯ ಮಧ್ಯೆ ಡಾಂಬರೀಕರಣ ಕಿತ್ತು ಹೋಗಿ ಹಲವು ತಿಂಗಳುಗಳೇ ಕಳೆದರೂ ಇದುವರೆಗೆ ದುರಸ್ತಿ ಮಾಡಲಾಗಿಲ್ಲ. ಜೋರಾಗಿ ಮಳೆ ಸುರಿಯುವ ಸಂದರ್ಭದಲ್ಲಿ ಮತ್ತು ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಕೆಳಗಡೆ ಬಿದ್ದು ಗಾಯಗೊಂಡಿದ್ದಾರೆ. ರೈಲ್ವೆ ಇಲಾಖೆ ಇಲ್ಲವೆ ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಂಡು ದುರಸ್ತಿ ಮಾಡಿಸಿದರೆ ವಾಹನ ಸವಾರರು ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಿದೆ~ ಎನ್ನುತ್ತಾರೆ  ರೈತ ಮಂಜುನಾಥ್.

ಇದೇ ರಸ್ತೆಯ ಮೂಲಕ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಬಸ್, ಲಾರಿ, ಕಾರು ಸೇರಿದಂತೆ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಕೂಡಲೇ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಒತ್ತಾಸೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.