ಶಿಷ್ಯ ತನಗಿಂತ ಹೆಚ್ಚಿನ ಸಾಧನೆ ಮಾಡಿದರೆ ಗುರು ಹೆಮ್ಮೆಪಡುತ್ತಾನೆ. ಅದೇ ಶಿಷ್ಯ ಗುಣದಲ್ಲಿ ತನಗೇ ಆದರ್ಶವಾದರೆ?
‘ನಾನು ಈಗ ಪರ್ಯಾಯ ಪೀಠ ಏರಿದರೂ, ಮುಂದೆ ಏರಿದರೂ ಅದು ನನ್ನ ಮೊದಲನೆ ಪರ್ಯಾಯವೇ ಆಗುತ್ತದೆ. ಗುರುಗಳಿಗೆ ಐದನೇ ಪರ್ಯಾಯ ನಡೆಸುವ ಅವಕಾಶ ಬಂದಿದೆ. ಅವರೇ ಪೀಠಾರೋಹಣ ಮಾಡಲಿ’ ಹೀಗೆ ತುಂಬಿದ ಮನಸ್ಸಿನಿಂದ ಹೇಳಿದವರು ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ.
ತ್ಯಾಗದಿಂದ ಅವರು ಕಳೆದುಕೊಂಡದ್ದಕ್ಕಿಂತ ಗಳಿಸಿದ್ದೇ ಹೆಚ್ಚು. ಗೋ– ಸೇವಕ, ಕೃಷಿಕ, ಲೋಕ ಸಂಚಾರಿ ಇತ್ಯಾದಿ ವಿಶೇಷಗಳಿಂದ ಕರೆಯಿಸಿಕೊಳ್ಳುವ ವಿಶ್ವಪ್ರಸನ್ನರ ಉದಾತ್ತ ವ್ಯಕ್ತಿತ್ವಕ್ಕೆ ಈ ನಿರ್ಧಾರ ಮತ್ತಷ್ಟು ಮೆರುಗು ನೀಡಿತು. ಅಧಿಕಾರಕ್ಕಾಗಿ ನೈತಿಕತೆ ಬಿಟ್ಟು ನಡೆದುಕೊಳ್ಳುವ ಕಾಲದಲ್ಲಿ ಅವಕಾಶ ಗುರುವಿಗೇ ಇರಲಿ ಎನ್ನುವ ಮೂಲಕ ದಿಟ ಸರ್ವಸಂಗ ಪರಿತ್ಯಾಗಿಯಾದರು.
ತಾನೊಬ್ಬ ಸಂತ ಎಂಬ ಮೇಲರಿಮೆ ಇಲ್ಲದ ವಿಶ್ವಪ್ರಸನ್ನ ಸ್ವಾಮೀಜಿ ಎಂತಹವರಿಗೂ ಮೊದಲ ಭೇಟಿಯಲ್ಲೇ ಆಪ್ತರೆನಿಸಿದರೆ ಅದಕ್ಕೆ ಅವರ ವ್ಯಕ್ತಿತ್ವವೇ ಕಾರಣ. ಸರಳತೆ, ಸಜ್ಜನಿಕೆ, ಸಮಾಧಾನ ಅಂತರ್ಗತ ಗುಣಗಳು. ಜ್ಞಾನ ವೃದ್ಧಿಯಾಗಬೇಕೆಂದರೆ ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತಿದೆ. ಎರಡನ್ನೂ ಅಕ್ಷರಶಃ ಮಾಡುತ್ತಿದ್ದಾರೆ. 52ರ ಹರೆಯಲ್ಲಿಯೂ 12ರ ಹುಡುಗನ ಉತ್ಸಾಹ 70ರ ಪ್ರಬುದ್ಧತೆ.
ದೇವಿದಾಸ ವಿಶ್ವಪ್ರಸನ್ನರಾದರು:
ಮಂಗಳೂರಿನಿಂದ ಸುಮಾರು 23 ಕಿ.ಮೀ ದೂರದಲ್ಲಿರುವ ಪಕ್ಷಿಕೆರೆಯಲ್ಲಿ ಕೃಷ್ಣ ಭಟ್ ಮತ್ತು ಯಮುನಮ್ಮ ದಂಪತಿಯ ಪುತ್ರರಾಗಿ ವಿಶ್ವಪ್ರಸನ್ನ ಜನಿಸಿದರು. ತಂದೆ– ತಾಯಿ ಇಟ್ಟ ಹೆಸರು ದೇವಿದಾಸ. ಪುನರೂರಿನ ಭಾರತ ಮಾತಾ ಹೈಯರ್ ಪ್ರೈಮರಿ ಶಾಲೆಯಲ್ಲಿ 1ರಿಂದ 7ನೇ ತರಗತಿಯ ವರೆಗೆ ಕಲಿತರು. 11–12ನೇ ವಯಸ್ಸಿನಲ್ಲಿಯೇ ಅವರು ಕಾವ್ಯ ಮತ್ತು ಸಾಹಿತ್ಯವನ್ನು ಉಡುಪಿಯ ಶ್ರೀಮನ್ವಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು.
ಆ ನಂತರ ಒಂದು ವರ್ಷ ಆಂಧ್ರಪ್ರದೇಶದ ಕಾಕಿನಾಡದ ಶ್ರಿ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಸೇವೆ ಸಲ್ಲಿಸಿದರು. ಸಂಸ್ಕೃತ, ಅಷ್ಟಾಂಗ ಯೋಗ, ವೇದಾಂತ, ತರ್ಕ, ವ್ಯಾಕರಣ, ಸಾಹಿತ್ಯ, ನ್ಯಾಯ, ಋಗ್ವೇದ, ಯಜುರ್ವೇದವನ್ನು ಅಧ್ಯಯನ ಮಾಡಿದರು. ಮೂರು ವರ್ಷಗಳ ಕಾಲ ವೇದಾಂತ ವಿದ್ವತ್ ಅನ್ನೂ ಅಧ್ಯಯನ ಮಾಡಿದರು. ವಿದ್ಯಾಮಾನ್ಯತೀರ್ಥ ಹಾಗೂ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ತರ್ಕ ವೇದಾಂತವನ್ನೂ ಕಲಿತರು. ಚತುರ್ವೇದಗಳಲ್ಲಿಯೂ ಪಾಂಡಿತ್ಯ ಪಡೆದಿರುವ ಅವರು ಚತುರ್ವೇದಿಯೂ ಆಗಿದ್ದಾರೆ.
ಉಡುಪಿಯ ಪೂರ್ಣ ಪ್ರಜ್ಞ ಸಂಜೆ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕಲಿತರು. ವೇದಾಂತ ಅಧ್ಯಯನ ಮಾಡುವಾಗಲೇ ಅವರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಕಾಂ ಪರೀಕ್ಷೆ ಕಟ್ಟಿ ಒಂದು ವರ್ಷ ಕಲಿತರು.
ದೇವಿದಾಸರ ಪಾಂಡಿತ್ಯ, ಗುಣಗಳ ಬಗ್ಗೆ ಚೆನ್ನಾಗಿ ಅರಿತಿದ್ದ ವಿದ್ಯಾಮಾನ್ಯತೀರ್ಥ ಸ್ವಾಮೀಜಿ ಹಾಗೂ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕಾರಕ್ಕೆ ಸಿದ್ಧರಾಗುವಂತೆ ಸೂಚನೆ ನೀಡಿದರು. ಅದರಂತೆ 1988 ಫೆಬ್ರುವರಿ 21ರಂದು ಸನ್ಯಾಸ ಸ್ವೀಕರಿಸಿದ ದೇವಿದಾಸರು ವಿಶ್ವಪ್ರಸನ್ನರಾದರು.
ವಿಶ್ವಪ್ರಸನ್ನ ಸ್ವಾಮೀಜಿ ಅವರಿಂದ ಗೋ ಸೇವೆ ಸದ್ದಿಲ್ಲದೆ ನಡೆಯುತ್ತಿದೆ. ಅದಕ್ಕಾಗಿ ಅವರು 2000ನೇ ಇಸವಿಯಲ್ಲಿ ಶ್ರೀಕೃಷ್ಣ ಗೋರಕ್ಷಣಾ ಟ್ರಸ್ಟ್ ಆರಂಭಿಸಿದರು. ಕೊಡವೂರಿನ ನಂದಗೋಕುಲ ಗೋಶಾಲೆ ಆರಂಭಿಸಿ ಗೋಪಾಲನೆಯಲ್ಲಿ ತೊಡಗಿದರು. ಇಲ್ಲಿ ಸುಮಾರು 100 ರಾಸುಗಳನ್ನು ಅವರು ಪೋಷಿಸುತ್ತಿದ್ದಾರೆ. ಆ ನಂತರ ಅವರು ನೀಲಾವರದಲ್ಲಿ ಗೋವರ್ಧನಗಿರಿ ಟ್ರಸ್ಟ್ ಆರಂಭಿಸಿದರು. 35 ಎಕರೆಯ ವಿಶಾಲ ಜಾಗದಲ್ಲಿ ಈಗ ಸುಮಾರು 1,200 ರಾಸುಗಳನ್ನು ಅವರು ಪೋಷಿಸುತ್ತಿದ್ದಾರೆ.
ವಿಶ್ವಜ್ಞಾನೀನ ಟ್ರಸ್ಟ್ ಮೂಲಕ ವಿಶೇಷ ಮಕ್ಕಳ ಪೋಷಣೆಯ ಕೆಲಸವನ್ನೂ ಮಾಡುತ್ತಿದ್ದಾರೆ. ವಸತಿ ಸಹಿತ ಶಾಲೆಯನ್ನು ನಡೆಸುತ್ತಿದ್ದಾರೆ. ಪರಿಸರ ಪ್ರೇಮಿಯೂ ಆಗಿರುವ ವಿಶ್ವಪ್ರಸನ್ನರು ಅಪರೂಪದ ವೃಕ್ಷ ಸಂಪತ್ತನ್ನು ರಕ್ಷಿಸಲು ‘ವೃಕ್ಷ ರಕ್ಷ ವಿಶ್ವ ರಕ್ಷ’ ಎಂಬ ಯೋಜನೆಯನ್ನು 2004ರಲ್ಲಿ ಆರಂಭಿಸಿ
ದ್ದಾರೆ. ಅಪರೂಪದ ಗಿಡ, ಮರಗಳನ್ನು ಅವರು ರಕ್ಷಿಸುತ್ತಿದ್ದಾರೆ. ಪಾದಯಾತ್ರೆ ನಡೆಸುವ ಮೂಲಕ ವಾಸ್ತವಗಳನ್ನು ಅರಿಯುವುದು ಅವರ ಇನ್ನೊಂದು ವಿಶೇಷತೆ. ಈ ವರೆಗೆ ನೂರಾರು ಕಿ.ಮೀ ಪಾದಯಾತ್ರೆ ಮಾಡಿ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ಲೋಕದ ವಾಸ್ತವ ಅರಿಯಲು ಕಂಡುಕೊಂಡಿರುವ ಮಾರ್ಗವಿದು.
ನಂದಗೋಕುಲ ಗೋಶಾಲೆ ಆವರಣದಲ್ಲಿ ಪಾಲಿ ಹೌಸ್‌ನಲ್ಲಿ ಹೈಡ್ರೋಫೋನಿಕ್ ವಿಧಾನದ ಮೂಲಕ ಡೊಳ್ಳು ಮೆಣಸಿನಕಾಯಿ ಬೆಳೆಸುವ ಮೂಲಕ ಆಧುನಿಕ ಕೃಷಿಕರೂ ಎನಿಸಿಕೊಂಡಿದ್ದಾರೆ. ಹೊಸ ವಿಧಾನ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿದರೆ ಲಾಭಗಳಿಸಬಹುದು ಎಂದು ಸಹ ಅವರು ತೋರಿಸಿಕೊಟ್ಟಿದ್ದಾರೆ. ಸಮಾಜಮುಖಿ ಕೆಲಸ, ಗೋಸಂರಕ್ಷಣೆ, ಕೃಷಿ, ಅಕ್ಷರ ದಾಸೋಹ ಮಾಡುತ್ತಿರುವ ವಿಶ್ವಪ್ರಸನ್ನರು ಗುರುವಿಗೆ ತಕ್ಕ ಶಿಷ್ಯ ಎನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.