ADVERTISEMENT

ಗೋಕಾಕ್ ಜನಿಸಿದ ಮನೆ ಇಂದು ಬಚ್ಚಲು ಕೋಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಹಾವೇರಿ: ಭಾರತ ಸಿಂಧು ರಶ್ಮಿ ಖ್ಯಾತಿಯ ಜ್ಞಾನಪೀಠ ಪುರಸ್ಕೃತ ಡಾ. ವಿ.ಕೃ.ಗೋಕಾಕ್ ಹುಟ್ಟಿದ ಮನೆ ಸ್ಮಾರಕವಾಗುವ ಬದಲು ಬಚ್ಚಲು (ಸ್ನಾನದ) ಮನೆಯಾಗಿ ಮಾರ್ಪಟ್ಟಿದೆ.

ಜಿಲ್ಲೆಯ ಸವಣೂರು ಪಟ್ಟಣದ ಜೋಶಿ ಗಲ್ಲಿಯಲ್ಲಿರುವ ಜೋಶಿ ಅವರ ಕುಟುಂಬಕ್ಕೆ ಸೇರಿದ ಬಾಡಿಗೆ ಮನೆಯ ಬಾಣಂತಿ ಕೋಣೆಯಲ್ಲಿ (ಹೆರಿಗೆಗಾಗಿ ಇರುವ ಪ್ರತ್ಯೇಕ ಕೊಠಡಿ)1909 ಆಗಸ್ಟ್ 9 ರಂದು ಜನಿಸಿದ ಗೋಕಾಕ್, ಎಸ್ಸೆಸ್ಸೆಲ್ಸಿವರೆಗೆ ಅದೇ ಊರಿನಲ್ಲಿಯೇ ಅಭ್ಯಾಸ ಮಾಡಿದ್ದರು.

ನಂತರದ ದಿನಗಳಲ್ಲಿ ಹೆಚ್ಚಿನ ಅಧ್ಯಯನ, ಅಧ್ಯಾಪಕ ವೃತ್ತಿಗಾಗಿ ಅವರು ಸವಣೂರು ಪಟ್ಟಣದಿಂದ ಹೊರಗೆ ಇದ್ದರೂ, ಅವರ ತಂದೆ ತಾಯಿ ಮಾತ್ರ ಜೀವಿತದ ಕೊನೆಯವರೆಗೆ ಅಲ್ಲಿಯೇ ಇದ್ದರು. ಅವರಿದ್ದ ಆ ಮನೆ ಇಂದಿಗೂ ಜೋಶಿ ಕುಟುಂಬದ ಒಡೆತನದಲ್ಲಿದೆ. ಮನೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಆ ಕುಟುಂಬದವರು ಬದಲಾವಣೆ ಮಾಡಿಕೊಂಡಿದ್ದು, ಗೋಕಾಕ್ ಹುಟ್ಟಿದ ಕೋಣೆಯನ್ನು ಈಗ  ಬಚ್ಚಲು ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ADVERTISEMENT

ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಯ ಕವಿಶೈಲದಂತೆ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಗೋಕಾಕ್ ಅವರು ಜನಿಸಿದ್ದ ಮನೆಯನ್ನೂ ಮಾಡಬೇಕು. ಇಂದಿನ ಪೀಳಿಗೆಗೆ ಅವರ ಬದುಕು, ಬರಹವನ್ನು ಪರಿಚಯಿಸುವಂತಾಗಬೇಕೆಂಬ ಸಾಹಿತ್ಯಾಭಿಮಾನಿಗಳ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ.

ತಮಗೆ ಹೆಮ್ಮೆಯಿದೆ:  `ಗೋಕಾಕ್ ಅವರು ನಮ್ಮ ಮನೆಯಲ್ಲಿ ಜನಿಸಿದ್ದರು ಎನ್ನುವುದೇ ನಮಗೆ ಹೆಮ್ಮೆಯ ವಿಷಯ. ಅದೇ ಕಾರಣಕ್ಕೆ ಟ್ರಸ್ಟ್ ಸದಸ್ಯರು ಹಾಗೂ ಜಿಲ್ಲಾಡಳಿತದವರು ಮನೆ ನೀಡುವಂತೆ ಕೇಳಿದಾಗ ನಾವು ಒಪ್ಪಿದ್ದೇವು. ಆದರೆ, ಸ್ಮಾರಕ ನಿರ್ಮಾಣಕ್ಕೆ ಮನೆ ಸೂಕ್ತವಾಗಿಲ್ಲ ಎಂದು ಹೇಳಿ ಖರೀದಿಯಿಂದ ನಂತರ ಹಿಂದೆಸರಿದರು~ ಎಂದು ಹೇಳುತ್ತಾರೆ ಜೋಶಿ ಕುಟುಂದ ಸದಸ್ಯ ರವಿ ಜೋಶಿ.

`ಈಗಲೂ ಸರ್ಕಾರ ಸೂಕ್ತ ಬೆಲೆ ನೀಡಿ ಮನೆ  ಖರೀದಿಸಲು ಮುಂದಾದರೆ, ನಮ್ಮ ಸಹೋದರರ ಜತೆ ಚರ್ಚಿಸಿ ನೀಡಲು ಸಿದ್ಧ~ ಎಂದು ಅವರು ತಿಳಿಸಿದ್ದಾರೆ.

ಸ್ಮಾರಕ ಭವನ ನಿರ್ಮಾಣ:  `ಪುರಸಭೆ ನೀಡಿದ ಜಾಗದಲ್ಲಿ ಸುಮಾರು 2.45 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಸ್ಟ್ ಸ್ಮಾರಕ ನಿರ್ಮಿಸುತ್ತಿದೆ. ಗೋಕಾಕ್ ಅವರು ಹುಟ್ಟಿದ ಮನೆಯನ್ನು ಪಡೆದು ಅದನ್ನೇ ಸ್ಮಾರಕವನ್ನಾಗಿ ಮಾಡುವ ಚಿಂತನೆ ಇತ್ತು. ಆದರೆ, ಜೋಶಿ ಕುಟುಂಬದವರು ಹೆಚ್ಚಿನ ಹಣ ನಿರೀಕ್ಷೆ ಮಾಡಿದ್ದರಿಂದ ಆ ವಿಚಾರವನ್ನು ಬಿಟ್ಟು ಅದೇ ಊರಿನಲ್ಲಿ ಬೇರೆ ಕಡೆ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ~ ಎಂದು ಟ್ರಸ್ಟ್ ಅಧ್ಯಕ್ಷ ಪಾಟೀಲ ಪುಟ್ಟಪ್ಪ ತಿಳಿಸುತ್ತಾರೆ.

ಪ್ರಯತ್ನ ವಿಫಲ

ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಡಾ. ವಿ.ಕೃ.ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಗೋಕಾಕ್ ಜನಿಸಿದ ಮನೆಯನ್ನು ಜೋಶಿ ಕುಟುಂಬದಿಂದ ಖರೀದಿಸಿ ಅದನ್ನೊಂದು ಸಭಾಭವನ ಹಾಗೂ ಸ್ಮಾರಕ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ಮಾತುಕತೆ ನಡೆದಿತ್ತಾದರೂ ಹಣಕಾಸಿನ ವಿಷಯದಲ್ಲಿ ಹೊಂದಾಣಿಕೆಯಾಗಲಿಲ್ಲ. ಹಾಗಾಗಿ ಮನೆ ಖರೀದಿಸಲು ಟ್ರಸ್ಟ್‌ಗೆ ಸಾಧ್ಯವಾಗಲಿಲ್ಲ  ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.