ADVERTISEMENT

ಜಾತಿ ಕೇಳಿ ಊಟದಿಂದ ಹೊರ ಕಳುಹಿಸಿದರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಉಡುಪಿ: `ನವರಾತ್ರಿ ಪ್ರಯುಕ್ತ ಅ. 2ರಂದು ಕುಂಜಾರುಗಿರಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಊಟಕ್ಕೆ ಕುಳಿತ ನಮ್ಮನ್ನು ಬ್ರಾಹ್ಮಣರಲ್ಲ, ನಮ್ಮ-ನಿಮ್ಮ ಸಂಪ್ರದಾಯ ಬೇರೆ ಎಂದು ಎಬ್ಬಿಸಿ ಕಳುಹಿಸಿದರು~ ಎಂದು ಅಳಲು ತೋಡಿಕೊಂಡಿರುವ ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ದೀಪಾಲಿ ಕಾಮತ್, `ಹಸಿದು ತುತ್ತು ಬಾಯಿಗಿಡುತ್ತಿದ್ದವರನ್ನು ಎಬ್ಬಿಸಿ ಕಳುಹಿಸುವುದು ಯಾವ ಸಂಪ್ರದಾಯ?~ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಉಡುಪಿ ತಾಲ್ಲೂಕಿನ ಪಾಜಕದ ಕುಂಜಾರುಗಿರಿಯಲ್ಲಿ ವಾರದ ಹಿಂದೆ ನಡೆದ ಘಟನೆ ಬಗ್ಗೆ ಶನಿವಾರ `ಪ್ರಜಾವಾಣಿ~ ಎದುರು ದುಃಖ ತೋಡಿಕೊಂಡ ದೀಪಾಲಿ, `ನಾವೂ ಬ್ರಾಹ್ಮಣರೇ. ಆದರೆ ಗೌಡ ಸಾರಸ್ವತ ಬ್ರಾಹ್ಮಣರು(ಜಿಎಸ್‌ಬಿ). ಹಾಗೆಂದು ನಮ್ಮ ದೇವಸ್ಥಾನಗಳಲ್ಲಿ ಊಟಕ್ಕೆ ಕುಳಿತವರನ್ನು ನಮ್ಮ ಸಂಪ್ರದಾಯದಲ್ಲಿ ಯಾರೂ ಎಬ್ಬಿಸಿ ಕಳುಹಿಸುವುದಿಲ್ಲ. ಇಲ್ಲಿ ಮಾತ್ರ ಮನುಷ್ಯತ್ವವೇ ಇಲ್ಲದ ಸಂಪ್ರದಾಯ ಅನುಸರಿಸಿದ್ದು ಅದೆಷ್ಟು ಸರಿ? ಇದೆಂಥ ಜಾತಿ ಪ್ರೀತಿ?~ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ದೀಪಾಲಿ ಅವರ ಮಾತುಗಳಲ್ಲೇ ಹೇಳುವುದಾದರೆ: `ನವರಾತ್ರಿ ಪ್ರಯುಕ್ತ ದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪಾಜಕದ ಕುಂಜಾರುಗಿರಿ ದೇವಸ್ಥಾನಕ್ಕೆ ಅಪ್ಪ, ಅಮ್ಮ ಹಾಗೂ ಪುತ್ರಿಯೊಂದಿಗೆ ಭೇಟಿ ನೀಡಿದ್ದಾಗ ಅಲ್ಲಿ ಚಂಡಿಕಾಹೋಮ ನಡೆಯುತ್ತಿತ್ತು. ಬಳಿಕ ಹೋಮದ ಪ್ರಸಾದ ಸ್ವೀಕರಿಸಿ ಹೋಗುವಂತೆ ಅಲ್ಲಿಯೇ ಇದ್ದ ಬ್ರಾಹ್ಮಣರೊಬ್ಬರು, ಭೋಜನ ಶಾಲೆ ತೋರಿಸಿದರು. ಅಲ್ಲದೇ ಈಗಲೇ ಹೋಗಿ ಕುಳಿತುಕೊಳ್ಳಿ ತಪ್ಪಿದಲ್ಲಿ ನಿಮಗೆ ಸ್ಥಳಾವಕಾಶ ಸಿಗದು ಎಂದೂ ಹೇಳಿದರು~.

`ನಂತರ ಎಲೆಹಾಕಿ ಊಟ ಬಡಿಸಿದರು. ಇನ್ನೇನು ನನ್ನ 8 ವರ್ಷದ ಪುತ್ರಿ ತುತ್ತು ಬಾಯಿಗೆ ಇಡಬೇಕು ಎನ್ನುವಾಗಲೇ ಆಗಮಿಸಿದ ವ್ಯಕ್ತಿಯೊಬ್ಬರು, `ನೀವು ಬ್ರಾಹ್ಮಣರೇ? ಹಾಗಿಲ್ಲದ ಮೇಲೆ ಇಲ್ಲೇಕೆ ಕುಳಿತಿದ್ದೀರಿ? ನಿಮ್ಮ ಸಂಪ್ರದಾಯ ನಮ್ಮದು ಬೇರೆ ಬೇರೆ. ಎಲೆ ಬಿಟ್ಟು ಎದ್ದೇಳಿ~ ಎಂದರು.

ಅದಕ್ಕೆ ನನ್ನ ತಾಯಿ, `ನಾವೂ ಬ್ರಾಹ್ಮಣರೇ. ಎಲೆ ಮುಂದೆ ಕುಳಿತವರನ್ನು ಎದ್ದುಹೋಗಿ ಎಂದು ಹೇಳುವುದು ನಿಮ್ಮದು ಯಾವ ಸಂಪ್ರದಾಯ?~ ಎಂದು ಪ್ರಶ್ನಿಸಿದರು. ನಂತರ ಗದ್ದಲ ಮಾಡುವುದು ಬೇಡ ಎಂದು ಊಟ ಮಾಡದೇ ಮರಳಿದೆವು~.

ಕುಂಜಾರುಗಿರಿ ದೇವಸ್ಥಾನ ಪ್ರತಿಕ್ರಿಯೆ
ಈ ಬಗ್ಗೆ `ಪ್ರಜಾವಾಣಿ~ ಶನಿವಾರ ಪ್ರಶ್ನಿಸಿದಾಗ `ಇದರಲ್ಲಿ ದೇವಸ್ಥಾನದ ಪಾತ್ರವೇನೂ ಇಲ್ಲ. ಯಾವುದೇ ತಾರತಮ್ಯವೂ ನಡೆದಿಲ್ಲ. ಬೇರೆಯವರ ಹರಕೆ ಊಟಕ್ಕೂ, ಸಹ ಭೋಜನಕ್ಕೂ ವ್ಯತ್ಯಾಸ ತಿಳಿಯದೇ ಹೀಗಾಗಿದೆ~ ಎಂದು ಕುಂಜಾರುಗಿರಿ ಶ್ರೀದುರ್ಗಾ ದೇವಸ್ಥಾನದ ವ್ಯವಸ್ಥಾಪಕ ರಾಜೇಂದ್ರ ಪ್ರತಿಕ್ರಿಯಿಸಿದರು.

`ಅಂದು ದೇವಸ್ಥಾನದಲ್ಲಿ ಹರಕೆಯ ಚಂಡಿಕಾಹೋಮವಿತ್ತು. ಅದರ ಸಮಾರಾಧನೆಗೆ ಹರಕೆ ಹೊತ್ತವರೇ ಸಂಪೂರ್ಣ ಹಣ ನೀಡಿರುತ್ತಾರೆ. ಎಷ್ಟು ಜನ ಮತ್ತು ಯಾರು ಊಟಕ್ಕೆ ಬರುತ್ತಾರೆ ಎಂಬುದನ್ನೂ ಅವರೇ ನಿರ್ಧರಿಸಿರುತ್ತಾರೆ. ದೇವಸ್ಥಾನದ ಹಣದಿಂದ ಊಟ ಹಾಕುತ್ತಿಲ್ಲವಾದ ಕಾರಣ ಅಪರಿಚಿತರು ಬಂದು ಕುಳಿತರೇ ಎಬ್ಬಿಸಬೇಕಾಗುತ್ತದೆ. ದೇವಸ್ಥಾನದ ಸಹ ಭೋಜನ ವ್ಯವಸ್ಥೆ ಬೇರೆ ಇದೆ. ಅಲ್ಲಿಗೆ ಬಂದು ಊಟ ಮಾಡಿ, ಇದು ಹರಕೆ ಊಟ ಎಂದರೂ ಅವರು ಒಪ್ಪಿಲ್ಲ~ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.