ADVERTISEMENT

ಜಾತಿ ನಿರ್ಮೂಲನೆಯಾಗಲಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 11:10 IST
Last Updated 25 ಜನವರಿ 2011, 11:10 IST

ದೇಶನೂರ (ಬೈಲಹೊಂಗಲ): ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣ ಮಾಡುವುದೇ ಧರ್ಮಗಳ ಮೂಲ ಉದ್ದೇಶವಾಗಿದೆ ಎಂದು ಚನ್ನಮ್ಮನ ಕಿತ್ತೂರ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಸ್ನಾನಿಕ ಅರುಳಪ್ಪರ ವಿರಕ್ತಮಠದ ಮೆನಿನೊ ಸ್ವಾಮೀಜಿ ಹುಟ್ಟು ಹಬ್ಬದ ಸುವರ್ಣ ಮಹೋತ್ಸವದ ಅಂಗವಾಗಿ ಮ್ಯೂಜಿಯಂ ಉದ್ಘಾಟನೆ ನೆರವೇರಿಸಿ  ಅವರು ಮಾತನಾಡಿದರು. ಜಾತಿ ನಿರ್ಮೂಲನೆ ಪ್ರತಿಯೊಬ್ಬರು ಶ್ರಮಿಸಿಬೇಕಾಗಿದೆ ಎಂದು ಹೇಳಿದರು.

ಹಳ್ಳಿಗಳೇ ನಮ್ಮ ದೇಶದ ಬೆನ್ನೆಲುಬು ಎನ್ನುವುದರನ್ನು ಅರಿತು ಗ್ರಾಮೀಣ ಭಾಗದಲ್ಲಿ ಸ್ನಾನಿಕ ಅರುಳಪ್ಪರ ಸ್ವಾಮೀಜಿ ಶಿಕ್ಷಣ, ಸಂಸ್ಕಾರ ಸೇರಿದಂತೆ ಮಾಡಿದ ವಿವಿಧ ಕಾರ್ಯ ಅಭಿನಂದನರ್ಹಾವಾಗಿದೆ ಎಂದ ಅವರು ಮೆನಿನೊ ಸ್ವಾಮೀಜಿ ಇನ್ನೂ ಹೆಚ್ಚಿನ ಕಾರ್ಯ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶುಭ ಹಾರೈಸಿದರು. ಬೆಳಗಾವಿ ಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೋ ಸಾನ್ನಿಧ್ಯ ವಹಿಸಿದ್ದರು.

ಸವಣೂರ ಸಯ್ಯದ ಶಮಶುಲಹ್, ಗೋವಾ ಪ್ರಾಂತ್ಯದ ಅಂಥೋನಿ ಡಿಸಿಲ್ವಾ, ಮಠಾಧೀಶ ಮೆನಿನೋ ಸ್ವಾಮೀಜಿ, ಜಿ.ಪಂ. ಸದಸ್ಯೆ ಮಂಜುಳಾ ಕೊಳದೂರ, ತಾ.ಪಂ. ಸದಸ್ಯ ವಿಠ್ಠಲ ದುರಗಣ್ಣವರ, ಗ್ರಾ.ಪಂ. ಅಧ್ಯಕ್ಷ ಅಬ್ಬಾಸಲಿ ಪೀರಜಾದೆ, ಉಪಾಧ್ಯಕ್ಷೆ ಗೌರಮ್ಮ ಹಳಿಜೋಳ ವೇದಿಕೆಯಲ್ಲಿದ್ದರು. ಸುವರ್ಣ ಸಂಭ್ರಮ ಅಭಿನಂದನಾ ಗ್ರಂಥವವನ್ನು ಬಿಡುಗಡೆ ಮಾಡಲಾಯಿತು.  ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆ, ವಿಶೇಷ ಪೂಜೆ ಜರುಗಿತು. 

ವೀರಜ್ಯೋತಿ ಯಾತ್ರೆ ನಾಳೆ
ಬೈಲಹೊಂಗಲ: ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ವತಿಯಿಂದ ಜ.26 ರಂದು ಮುಂಜಾನೆ 8.30ಕ್ಕೆ ವೀರಭದ್ರೇಶ್ವರ ದೇವಸ್ಥಾನ (ಶಿವಬಸವ ಕಲ್ಯಾಣ ಮಂಟಪ)ದಿಂದ ನಂದಗಡಕ್ಕೆ ರಾಯಣ್ಣನ ಅಭಿಮಾನಿಗಳು ತೆರಳಲಿದ್ದಾರೆ ಎಂದು ಸಮಿಔತಿಯ ಅಧ್ಯಕ್ಷ ಕುಮಾರ ದೇಶನೂರ ತಿಳಿಸಿದ್ದಾರೆ. ನಂದಗಡದಲ್ಲಿ ರಾಯಣ್ಣ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ, ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುವುದು. ಬೀಡಿ, ಚನ್ನಮ್ಮನ ಕಿತ್ತೂರ, ಸಂಗೊಳ್ಳಿ, ಕೆಂಗಾನೂರ, ನಯಾನಗರ, ಆನಿಗೋಳ ಮಾರ್ಗವಾಗಿ ಮಧ್ಯಾಹ್ನ 2ಕ್ಕೆ ಬೈಲಹೊಂಗಲ ಚನ್ನಮ್ಮಾ ಸಮಾಧಿಗೆ ಜ್ಯೋತಿಯನ್ನು ಅರ್ಪಿಸಲಾಗುವುದು ಎಂದು ಕುಮಾರ ದೇಶನೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.