ADVERTISEMENT

ಜಿ.ಪಂ. ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಕೊಪ್ಪಳ:ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ವಿರುದ್ಧ ಬುಧವಾರ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಯಿತು. ಆ ಮೂಲಕ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆಯಾಗಿ ಜ್ಯೋತಿ ಬಿಲ್ಗಾರ್  ಮುಂದುವರಿಯಲಿದ್ದಾರೆ.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈ ಸಂಬಂಧ ಕರೆದ ವಿಶೇಷ ಸಭೆಯಲ್ಲಿ ಬಿಜೆಪಿಯ 11 ಜನ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.
 
ಆದರೆ, ಪಂಚಾಯತ್‌ರಾಜ್ ನಿಯಮಗಳ ಪ್ರಕಾರ ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯ ಬಲದ ಮೂರನೇ ಒಂದರಷ್ಟು ಸಂಖ್ಯೆಯ ಸದಸ್ಯರು ಅಂದರೆ 9 ಜನ ಸದಸ್ಯರ ಉಪಸ್ಥಿತಿ ಇದ್ದುದರಿಂದ ಅವಿಶ್ವಾಸ ಗೊತ್ತುವಳಿ ಮಂಡನೆಗಾಗಿ ಸಭೆ ನಡೆಸಬಹುದು ಎಂದು ಜಿಲ್ಲಾ ಪಂಚಾಯಿತಿಯ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆ ಡಾ.ಸೀತಾ ಗೂಳಪ್ಪ ಹಲಗೇರಿ ಗೈರು ಹಾಜರಾಗಿದ್ದರಿಂದ ಸಭೆಯಲ್ಲಿ ಹಾಜರಿದ್ದ ಸದಸ್ಯ ಅಮರೇಶಪ್ಪ ಕುಳಗಿ ಅಧ್ಯಕ್ಷತೆ ವಹಿಸಿ ಸಭೆಯ ಕಲಾಪ ನಡೆಸಿದರು.

ನಂತರ ಸಭೆಯಲ್ಲಿ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಯ ಪರವಾಗಿ 11 ಸದಸ್ಯರು ಕೈ ಎತ್ತುವ ಮೂಲಕ ಸಮ್ಮತಿ ವ್ಯಕ್ತಪಡಿಸಿದರು. ಒಟ್ಟು 27 ಸದಸ್ಯರ ಪೈಕಿ ಕನಿಷ್ಠ 14 ಸದಸ್ಯರ ಸಮ್ಮತಿ ಅಗತ್ಯ. ಆದರೆ ಕೇವಲ 11 ಸದಸ್ಯರು ಮಾತ್ರ ಅವಿಶ್ವಾಸದ ಪರ ಮತ ಚಲಾಯಿಸಿದ್ದರಿಂದ ಗೊತ್ತುವಳಿಗೆ ಸೋಲುಂಟಾಗಿದೆ.
 
ಹೀಗಾಗಿ ಜ್ಯೋತಿ ಬಿಲ್ಗಾರ್ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆಯಾಗಿ ಮುಂದುವರೆಯಲಿದ್ದಾರೆ ಎಂದು ತುಳಸಿ ಮದ್ದಿನೇನಿ ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪಂಚಾಯಿತಿ ಸುತ್ತ ಬಿಗಿ ಪೊಲೀಸ್   ಬಂದೋಬಸ್ತ್ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.