ADVERTISEMENT

ಟೆಂಪೋ ಪಲ್ಟಿ: ಸ್ಥಳದಲ್ಲೇ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ಟೆಂಪೋ ಪಲ್ಟಿ: ಸ್ಥಳದಲ್ಲೇ ಮೂವರ ಸಾವು
ಟೆಂಪೋ ಪಲ್ಟಿ: ಸ್ಥಳದಲ್ಲೇ ಮೂವರ ಸಾವು   

ಜನವಾಡ: ತೊಗರಿ ಮಾರಾಟಕ್ಕೆ ತೆರಳುತ್ತಿದ್ದ ಮೂವರು, ಟೆಂಪೋ ಪಲ್ಟಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೀದರ್ ತಾಲ್ಲೂಕಿನ ಮರಕಲ್ ಸಮೀಪ ಬುಧವಾರ ಮಧ್ಯಾಹ್ನ ನಡೆದಿದೆ.

ಔರಾದ್ ತಾಲ್ಲೂಕಿನ ಜೀರ್ಗಾ (ಬಿ) ಗ್ರಾಮದ ಕಾಶಿನಾಥ ಕಲ್ಲಪ್ಪ ಬಂಬಳಗೆ (55), ಸಂಗಮೇಶ್ವರ ಅಮೃತ ಮೇತ್ರೆ (22) ಹಾಗೂ ಜೀರ್ಗಾ (ಕೆ) ಗ್ರಾಮದ ಇಸೂಬ್ ಬಾಸುಮಿಯ್ಯ (38) ಮೃತ ದುರ್ದೈವಿಗಳು.

ಘಟನೆಯಲ್ಲಿ ಒಟ್ಟು 12 ಜನ ಗಾಯಗೊಂಡಿದ್ದಾರೆ. ಈ ಪೈಕಿ ಜೀರ್ಗಾ (ಬಿ) ಗ್ರಾಮದವರಾದ ಕಾಶಿನಾಥ ನರಸಪ್ಪ (55), ಶರಣಪ್ಪ ಘಾಳೆಪ್ಪ ಕೋಟೆ ಮತ್ತು ಬೂದೆಪ್ಪ ಸಂಗನಬಸಪ್ಪ ಕೋಟೆ (50) ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಕಾಶಿನಾಥ ನರಸಪ್ಪ ಹಾಗೂ ಶರಣಪ್ಪ ಘಾಳೆಪ್ಪ ಎಂಬುವರನ್ನು ತುರ್ತು ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕೊಂಡ್ಯೊಯಲಾಗಿದೆ. ಇನ್ನುಳಿದವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಚಟ್ನಾಳ್, ಜೀರ್ಗಾ (ಬಿ) ಮತ್ತು ಜೀರ್ಗಾ (ಕೆ) ಗ್ರಾಮದ ರೈತರು ಟೆಂಪೋದಲ್ಲಿ ತೊಗರಿ, ಕಡಲೆ ಮತ್ತಿತರ ಧಾನ್ಯಗಳನ್ನು ತುಂಬಿಕೊಂಡು ಮಾರಾಟಕ್ಕಾಗಿ ಬೀದರ್‌ಗೆ ಹೊರಟಿದ್ದರು. ಕೃಷಿ ವಿಜ್ಞಾನ ಕೇಂದ್ರ ಹಾಗೂ ಮರಕಲ್ ನಡುವೆ ಏಕಾಏಕಿ ಟೆಂಪೋ ನಿಯಂತ್ರಣ ತಪ್ಪಿದ್ದರಿಂದ ದುರಂತ ಸಂಭವಿಸಿದೆ.

ಟೆಂಪೋ ಬುಡಮೇಲು ಆಗಿದ್ದರಿಂದ ಹಿಂಭಾಗದಲ್ಲಿ ಚೀಲಗಳ ಮೇಲೆ ಕುಳಿತಿದ್ದವರ ಪೈಕಿ ಮೂವರು ಟೆಂಪೋ ಹಾಗೂ ಚೀಲಗಳ ಕೆಳಗಡೆ ಸಿಕ್ಕು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬುಲ್ಡೋಜರ್ ನೆರವಿನಿಂದ ಟೆಂಪೋ ಅನ್ನು ಮೇಲಕ್ಕೆ ಎತ್ತಿ ಶವಗಳನ್ನು ಹೊರತೆಗೆಯಲಾಯಿತು. ಟೆಂಪೋ ಚಾಲಕ ಗಣಪತಿ ಬೋರ್ಗೆ ಎಂಬಾತ ಬಚಾವ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ಡಿ.ವೈ.ಎಸ್.ಪಿ. ಅಂಬಣ್ಣ ಚಿಪ್ಪರ್, ಬೀದರ್ ಗ್ರಾಮೀಣ ಸಿ.ಪಿ.ಐ. ಬಸವರಾಜ ತೇಲಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.