ADVERTISEMENT

ನಾಡಿಗೆ ಬಂದು ದಿಕ್ಕೆಟ್ಟು ಪ್ರಾಣ ಬಿಟ್ಟ ಕಾಡುಕೋಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ವಿಜಾಪುರ: ಬರದ ನಾಡು ವಿಜಾಪುರ ನಗರದಲ್ಲಿ ಏಕಾಏಕಿ ಪ್ರತ್ಯಕ್ಷವಾದ ಕಾಡುಕೋಣವೊಂದು ಗೋಲಗುಮ್ಮಟ ಆವರಣಕ್ಕೆ ನುಗ್ಗಿ ಇಬ್ಬರನ್ನು ಗಾಯಗೊಳಿಸಿ ಆರು ಗಂಟೆಗೂ ಹೆಚ್ಚು ಕಾಲ ರಾದ್ಧಾಂತ ನಡೆಸಿ, ಕೊನೆಗೆ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆಯಿತು.

ಅಗತ್ಯ ಉಪಕರಣ ಇಲ್ಲದೆ ತಡವಾಗಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯವರು ಕೈಚೆಲ್ಲಿದಾಗ ಹಂದಿಗಳನ್ನು ಹಿಡಿಯುವ ಯುವಕರು ಹಾಗೂ ಗೋಲಗುಮ್ಮಟದ ಸಿಬ್ಬಂದಿ ಕಾರ್ಯಾಚರಣೆಗಿಳಿದು ಕಾಡುಕೋಣವನ್ನು ಸೆರೆ ಹಿಡಿದರು.

ಈ ಘಟನೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30ರವರೆಗೂ ಪ್ರವಾಸಿಗರಿಗೆ ಗೋಲಗುಮ್ಮಟದ ಪ್ರವೇಶ ನಿರ್ಬಂಧಿಸಲಾಗಿತ್ತು.ಸೆರೆ ಸಿಕ್ಕ ಕಾಡುಕೋಣವನ್ನು ಅರಣ್ಯ ಇಲಾಖೆಯವರು ದಾಂಡೇಲಿ ಅಭಯಾರಣ್ಯಕ್ಕೆ ಸಾಗಿಸಲು ಮುಂದಾಗಿದ್ದರು. ಆದರೆ, ಸೆರೆ ಸಿಕ್ಕ ನಂತರ ಅದು ಮೃತಪಟ್ಟಿದ್ದರಿಂದ ಕಾರ್ಯಾಚರಣೆ ದುರಂತ ಅಂತ್ಯ ಕಂಡಿತು.

ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಗೋಲಗುಮ್ಮಟ ಹತ್ತಿರದ ಕಂದಕದಲ್ಲಿ ಕಾಣಿಸಿಕೊಂಡ ಈ ಕಾಡುಕೋಣ, ಅಲ್ಲಿ ಬಹಿರ್ದೆಸೆಗೆ ಹೋಗಿದ್ದ ಮಹಿಳೆಯೊಬ್ಬರಿಗೆ ತಿವಿದು ಗಾಯಗೊಳಿಸಿತು. ಜನ ಸೇರಿದ್ದರಿಂದ ಹೆದರಿ ಗೋಲಗುಮ್ಮಟ ಆವರಣ ಪ್ರವೇಶಿಸಿತು. ಅಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿಗೆ ಯತ್ನಿಸಿತು.

ಕಾಡೇ ಇಲ್ಲದ ಊರಿಗೆ ಕಾಡುಕೋಣ ನುಗ್ಗಿದ ಸಂಗತಿ ಜನತೆಯಲ್ಲಿ ಸೋಜಿಗವನ್ನು ಉಂಟುಮಾಡಿತ್ತು. ಇದು ಎಲ್ಲಿಂದ ಬಂತು ಎಂಬುದು ಗೊತ್ತಾಗಿಲ್ಲ. ಈ ಕಾಡುಕೋಣ ಅಷ್ಟೇನೂ ದೊಡ್ಡದಾಗಿರಲಿಲ್ಲ. ಆರು ಗಂಟೆಗೂ ಹೆಚ್ಚು ಕಾಲ ಓಡಾಡಿ ಕೊನೆಗೂ ನಿತ್ರಾಣವಾಗಿ ಮಧ್ಯಾಹ್ನ 12.30ಕ್ಕೆ ಸೆರೆ ಸಿಕ್ಕ ನಂತರ ಕಾಡುಕೋಣಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು.

`ಮತ್ತು ಬರಿಸುವ ಚುಚ್ಚುಮದ್ದು ನೀಡುವ ಗನ್ ನಮ್ಮಲ್ಲಿ ಇಲ್ಲ~ ಎಂದು ಹೇಳುತ್ತಿದ್ದ ಅರಣ್ಯ ಅಧಿಕಾರಿಗಳು ಪಕ್ಕದ ಜಿಲ್ಲೆಗಳಿಂದಲಾದರೂ ಅದನ್ನು ತರಿಸುವ ಪ್ರಯತ್ನ ಮಾಡಲಿಲ್ಲ. ಸೆರೆ ಸಿಕ್ಕ ನಂತರ ಮೃತಪಟ್ಟ ಕಾಡುಕೋಣವನ್ನು ಮಮದಾಪುರ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿ, ಅಲ್ಲಿಯೇ ಅಂತ್ಯಸಂಸ್ಕಾರ (ದಹನ) ನೆರವೇರಿಸಲಾಯಿತು.

`ಸೆರೆ ಸಿಕ್ಕ ಕಾಡು ಕೋಣವನ್ನು ದಾಂಡೇಲಿ ಅರಣ್ಯಕ್ಕೆ ಸಾಗಿಸುತ್ತಿದ್ದೆವು. ಪಶುವೈದ್ಯರು ತಪಾಸಣೆ ನಡೆಸಿದಾಗ ಅದು ಮೃತಪಟ್ಟಿರುವುದು ಖಚಿತವಾಯಿತು. ಅದರ ಸಾವಿಗೆ ಕಾರಣ ಗೊತ್ತಾಗಿಲ್ಲ.ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅದರ ವರದಿ ಬಂದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ~ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಪಾಟೀಲ ಹೇಳಿದರು. `ಸದ್ಯ ನಾನು ಬೆಂಗಳೂರಿನಲ್ಲಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಳಸದ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.