ADVERTISEMENT

ನಿಧಿ ಆಸೆ: ಪ್ರಾಣಿ ಬಲಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಬಸವನಬಾಗೇವಾಡಿ: ತಾಲ್ಲೂಕಿನ ಬೈರವಾಡಗಿ ಗ್ರಾಮದ ಜಮೀನೊಂದರಲ್ಲಿ ನಿಧಿ ಆಸೆಗಾಗಿ ಪ್ರಾಣಿ ಬಲಿ ನೀಡಿ ಪೂಜೆ ಸಲ್ಲಿಸಿರುವ  ಘಟನೆ ನಡೆದಿದೆ. ಸೋಮವಾರ ರಾತ್ರಿ ಬೆಂಗಳೂರು ಮೂಲದ ಅಪರಿಚಿತ ವಾಹನ ಗ್ರಾಮಕ್ಕೆ ಬಂದಿರುವುದನ್ನು ಕಂಡ ಕೆಲ ಗ್ರಾಮಸ್ಥರು ಸಂಶಯಗೊಂಡು ವಾಹನ ಮರಳಿ ಹೋಗದಂತೆ ರಸ್ತೆಗೆ ಅಡ್ಡಲಾಗಿ ದೊಡ್ಡ ಕಟ್ಟಿಗೆ ತುಂಡುಗಳನ್ನು ಹಾಕಿದರು.

ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಪೂಜೆ ಮುಗಿಸಿ ಹೊರಟ ವಾಹನವನ್ನು ಗ್ರಾಮಸ್ಥರು ತಡೆದು ಬೆಂಗಳೂರಿನಿಂದ ಬಂದಿದ್ದ ಐವರು ಹಾಗೂ ಇಂಡಿ ತಾಲ್ಲೂಕಿನ ಬೆನಕನಳ್ಳಿ ಗ್ರಾಮದ ಒಬ್ಬನನ್ನು ಹಿಡಿದು ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗ್ರಾಮಸ್ಥರ ವಶದಲ್ಲಿದ್ದವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪೂಜೆ ಸಲ್ಲಿಸಿದ ಜಮೀನಿಗೆ ಕರೆದೊಯ್ದು ಪರಿಶೀಲನೆ ನಡೆಸಿದರು. ಪೂಜೆ ಸಲ್ಲಿಸಿದ ಸ್ಥಳದಲ್ಲಿ ಲಿಂಬೆಹಣ್ಣು, ಮಣ್ಣಿನ ಮಡಿಕೆಗಳು, ಪೂಜಾ ಸಾಮಗ್ರಿಗಳು ಹಾಗೂ ಬಲಿ ನೀಡಿ ಮುಚ್ಚಿಟ್ಟಿದ್ದ 6 ಹುಂಜ, ರುಂಡವಿಲ್ಲದ 3 ಮೇಕೆ ಶವಗಳು ದೊರೆತಿವೆ.

ಇಂಡಿ ತಾಲ್ಲೂಕಿನ ಬೆನಕನಳ್ಳಿಯ ಮೌಲಾನಿ ಕಮಲಸಾಬ ಕುಡಚಿ, ದೀಪು ಬೋಜಪ್ಪ, ರಾಘವೇಂದ್ರ ಪೂಜಾರಿ, ವಿಜಯಕುಮಾರ ವಿಶ್ವನಾಥ, ಮೋಹನರಾಜ, ಕೈಲಾಸ ವಿಜಯಕುಮಾರ (ಎಲ್ಲರೂ ಬೆಂಗಳೂರಿನವರು) ಅವರನ್ನು ಬಂಧಿಸಲಾಗಿದೆ.

ಗ್ರಾಮಸ್ಥರ ದೂರಿನ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.