ADVERTISEMENT

ನೀರಾವರಿಗೆ ಬಾಂಡ್ ಮೂಲಕ ಹಣ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 16:20 IST
Last Updated 19 ಫೆಬ್ರುವರಿ 2011, 16:20 IST

ವಿಜಾಪುರ: ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಒತ್ತು ನೀಡಲಾಗುತ್ತಿದ್ದು, ಅಗತ್ಯಬಿದ್ದರೆ ಬಾಂಡ್‌ಗಳ ಮೂಲಕವೂ ಹಣ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ನೀರಾವರಿ ಯೋಜನೆಗಳಿಗೆ ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಸೂಕ್ಷ್ಮಅಂಶಗಳ ಬಗೆಗೆ ಹಾಗೂ ನ್ಯಾಯಮಂಡಳಿ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ವಿಧಾನ ಮಂಡಳದಲ್ಲಿ ಒಂದು ವಾರಗಳ ಕಾಲ ಮುಕ್ತ ಚರ್ಚೆಗೆ ಸಿದ್ಧ. ಇದಕ್ಕೆ ವಿರೋಧ ಪಕ್ಷದವರು ಸಹಕಾರ ನೀಡಬೇಕು’ ಎಂದು ಶನಿವಾರ ತಾಲ್ಲೂಕಿನ ತೊನಶ್ಯಾಳ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಏಪ್ರಿಲ್ ಮೊದಲವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಕೆಲವರ ಖಾತೆಗಳು ಬದಲಾವಣೆಯಾಗಲಿವೆ.

ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ. ಐದು ವರ್ಷ ಅಧಿಕಾರ ಪೂರೈಸುತ್ತೇನೆ’ ಎಂದರು.‘ಕೃಷಿ ಬಜೆಟ್‌ನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಇತರ ರಾಜ್ಯಗಳಿಗೆ ಇದು ಮಾದರಿಯೂ ಆಗಲಿದೆ. ಒಂದೇ ವರ್ಷದಲ್ಲಿ ಅಲ್ಲದಿದ್ದರೂ ಹಂತ ಹಂತವಾಗಿ ರೈತರು ಸ್ವಾಭಿಮಾನದಿಂದ ಜೀವನ ನಡೆಸಲು ಈ ಬಜೆಟ್ ದಾರಿದೀಪವಾಗಲಿದೆ’ ಎಂದು ಮುಖ್ಯಮಂತ್ರಿಗಳು ವ್ಯಾಖ್ಯಾನಿಸಿದರು.

 ಸಿನಿಮಾ ನೋಡಲು ರಜೆ..
‘ಇಲ್ಲಿಯವರೆಗೆ ವರ್ಷದ 365 ದಿನವೂ ಹುಚ್ಚರಂತೆ ಕೆಲಸ ಮಾಡಿದ್ದೇನೆ. ಇನ್ನು ವಾರಕ್ಕೊಮ್ಮೆ ರಜೆ ಪಡೆದು ನಾಟಕ- ಸಿನಿಮಾ ನೋಡುತ್ತೇನೆ. ಮನಸ್ಸು ಹಗುರ ಮಾಡಿಕೊಂಡು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ      ಹೇಳಿದರು.

ತಾಲ್ಲೂಕಿನ ತೊನಶ್ಯಾಳದಲ್ಲಿ ಕಾರ್ಯಕ್ರಮದುದ್ದಕ್ಕೂ ನಗುನಗುತ್ತಾ ಮಾತನಾಡಿದ ಅವರು, ‘ಯಾವಾಗಲೂ ಮುಖ ಸಿಂಡರಿಸಿಕೊಂಡಿರಬೇಡಿ. ನಗುನಗುತ್ತಾ ಇರಿ ಎಂದು ತರಳಬಾಳು ಶ್ರೀಗಳು ಹಾಗೂ ಇತರ ಶ್ರೀಗಳು ಹೇಳಿದ್ದಾರೆ. ಅವರು ಹೇಳಿದಂತೆ ಬದಲಾವಣೆ ಯಾಗುತ್ತಿದ್ದೇನೆ. ಅದಕ್ಕಾಗಿ ತಮಾಷೆ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT