ADVERTISEMENT

ನೆರೆ ಪೀಡಿತ ಸಂತ್ರಸ್ತರಿಗೆ ಆಸರೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಬಳವಡಗಿ (ಚಿತ್ತಾಪುರ ತಾ.): ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಇಂದು ಸಂಭ್ರಮದ ದಿನ.ಎರಡು ವರ್ಷಗಳ ಹಿಂದೆ ಎಡೆಬಿಡದೆ ಸುರಿದ ಮಳೆರಾಯನ ಅಬ್ಬರಕ್ಕೆ ಮನೆ ಕುಸಿದು ಬಿದ್ದಿತ್ತು. ಇನ್ನು ಮುಂದೆ ತಮ್ಮ ಗತಿಯೇನು? ಎಂದು ಚಿಂತಿಸುತ್ತ ದಿನ ಕಳೆದವರ ಮುಖದಲ್ಲಿ ಇಂದು ಖುಷಿಯ ಕಳೆ...

2009ರಲ್ಲಿ ಸಂಭವಿಸಿದ ನೆರೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ಶಾಶ್ವತ ಪುನರ್ವಸತಿಗಾಗಿ ರಾಜ್ಯ ಸರ್ಕಾರ ‘ಆಸರೆ’ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತು. ಅದರಂತೆ ಬಳವಡಗಿ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾದ ಮನೆಗಳನ್ನು ಸಂತ್ರಸ್ತರಿಗೆ ವಿತರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದಾಗಿ ಶನಿವಾರ ಆಗಮಿಸಿದ್ದರು.

ಪುನರ್ವಸತಿ ಯೋಜನೆಯಲ್ಲಿ ನಿರ್ಮಿಸಲಾದ 108 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಫಲಾನುಭವಿಗಳಿಗೆ ಮನೆ ಹಸ್ತಾಂತರಿಸುವ ಸರಳ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, “ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನವು ಉತ್ತರ ಕರ್ನಾಟಕದಲ್ಲಿ ಸಂತ್ರಸ್ತರಿಗೆ 2,262 ಮನೆಗಳನ್ನು ನಿರ್ಮಿಸುತ್ತಿದೆ.ಈಗಾಗಲೇ 1,701 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ಫೋಸಿಸ್‌ನಂಥ ಸಂಸ್ಥೆಗಳು ನೊಂದವರ ಕಣ್ಣೀರು ಒರೆಸಲು ಮುಂದಾಗುತ್ತಿರುವುದು ಶ್ಲಾಘನೀಯ” ಎಂದು ನುಡಿದರು.

’ಸಂತ್ರಸ್ತರು ಯಾವುದೇ ಕಾರಣಕ್ಕೂ ನೋವು ಅನುಭವಿಸಬಾರದು.ಇದಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸುವುದು ನನ್ನ ಆಸೆ. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳ ಜನರಿಗೆ ತಾತ್ಕಾಲಿನ ಪರಿಹಾರ ಕೊಟ್ಟರೂ ಮರುವರ್ಷ ಅದೇ ದುಸ್ಥಿತಿ ಎದುರಾಗುತ್ತದೆ. ಹೀಗಾಗಿ ಪ್ರವಾಹಪೀಡಿತ ಹಳ್ಳಿ ಸ್ಥಳಾಂತರ ಮಾಡಲು ಸರ್ಕಾರ ತೀರ್ಮಾನಿಸಿ, ಆಸರೆ ಯೋಜನೆ ರೂಪಿಸಿದೆ’ ಎಂದು ಹೇಳಿದರು.ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದರು. ಶಾಸಕ ವಾಲ್ಮೀಕಿ ನಾಯಕ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.