ADVERTISEMENT

ಪೊಲೀಸ್ ಠಾಣೆ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 19:30 IST
Last Updated 31 ಆಗಸ್ಟ್ 2011, 19:30 IST
ಪೊಲೀಸ್ ಠಾಣೆ ಸ್ಥಳಾಂತರಕ್ಕೆ ವಿರೋಧ
ಪೊಲೀಸ್ ಠಾಣೆ ಸ್ಥಳಾಂತರಕ್ಕೆ ವಿರೋಧ   

ಶ್ರೀರಂಗಪಟ್ಟಣ: ಪಟ್ಟಣದ ಹೃದಯ ಭಾಗದಲ್ಲಿನ ಪೊಲೀಸ್ ಠಾಣೆಯನ್ನು ಹೊರ ವಲಯದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸುವ ಯತ್ನ ನಡೆಯುತ್ತಿದ್ದು ಅದನ್ನು ವಿರೋಧಿಸಿ ವಿವಿಧ ಸಂಘಟನೆಮುಖಂಡರು ಬುಧವಾರ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದರು.

 ಠಾಣೆ ಪ್ರವೇಶದ್ವಾರದಲ್ಲಿ ಸುಮಾರು ಒಂದು ತಾಸು ಪ್ರತಿಭಟನೆ ನಡೆಯಿತು. ಡಿವೈಎಸ್ಪಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು. ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಯನ್ನು ಬೇರೆಡೆ ಸ್ಥಳಾಂತರಿಸಲು ಇಲಾಖೆ ಸಿದ್ಧತೆ ನಡೆಸುತ್ತಿದೆ. ಸೂಕ್ತ ಸ್ಥಳದಲ್ಲಿರುವ ಠಾಣೆಯನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿದರೆ ನಾಗರಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಠಾಣೆ ಸ್ಥಳಾಂತರ ಪ್ರಕ್ರಿಯೆ ಕೈಬಿಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಬಲರಾಮ್ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಡಿವೈಎಸ್ಪಿ ಕಲಾ ಕೃಷ್ಣಸ್ವಾಮಿ, `ನಮ್ಮ ಹಂತದಲ್ಲಿ ಏನೂ ಮಾಡಲಾಗದು. ಪೊಲೀಸ್ ಠಾಣೆ ಸ್ಥಳಾಂತರದಿಂದ ನಮಗೂ ಕಷ್ಟವಾಗುತ್ತದೆ. ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ~ ಎಂದು ಭರವಸೆ ನೀಡಿದರು.

ಪುರಸಭೆ ಸದಸ್ಯರಾದ ಕಾಯಿ ವೆಂಕಟೇಶ್, ಎಂ.ನಂದೀಶ್, ರವಿನಂದನ್, ಶಾಮಿಯಾನ ಪುಟ್ಟರಾಜು, ಕರವೇ ಮುಖಂಡ ಸಿ.ಸ್ವಾಮಿಗೌಡ, ಜಾನಪದ ಪರಿಷತ್ ಅಧ್ಯಕ್ಷ ಸಿ.ಪುಟ್ಟಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಹಾಲಪ್ಪ, ಮಂಜುನಾಥ್, ಛಾಯಾಗ್ರಾಹಕರ ಸಂಘದ ಸಲಹೆಗಾರ ರವಿ, ಉಮೇಶ್, ಕೆ.ಬಿ.ಬಸವರಾಜು, ಉಮೇಶ್‌ಕುಮಾರ್, ಜಿ.ಉಮಾಶಂಕರ್, ಎಂ.ಸುರೇಶ್, ಜೈನ್ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.