ADVERTISEMENT

ಪೌರಾಣಿಕ ನಾಟಕದಲ್ಲಿ ಮನಗೆದ್ದ ವನಿತೆಯರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಶ್ರೀರಂಗಪಟ್ಟಣ:  ದಸರಾ ಉತ್ಸವದಲ್ಲಿ ಮಹಿಳಾ ಕಲಾವಿದರು ಪೌರಾಣಿಕ ನಾಟಕದಲ್ಲಿ ಪುರುಷರ ಪಾತ್ರ ಮಾಡಿ `ಸೈ~ ಎನಿಸಿಕೊಂಡರು.

ನಾಗಮಂಗಲದ ವೀರಾಂಜನೇಯ ಮಹಿಳಾ ಮಂಡಳಿಯ ಕಲಾವಿದೆಯರು ಭಾನುವಾರ ಶ್ರೀರಂಗ ವೇದಿಕೆಯಲ್ಲಿ `ವೀರ ಅಭೀಮನ್ಯು~ ಅರ್ಥಾತ್ `ಶಶಿರೇಖಾ ಕಲ್ಯಾಣ ನಾಟಕ~ ಪ್ರದರ್ಶಿಸಿದರು. ಶ್ರೀಕೃಷ್ಣ ಪಾತ್ರಧಾರಿ ಯಶೋಧಮ್ಮ ತಮ್ಮ ಮೋಹಕ ನಗೆಯಿಂದ ಜನರ ಗಮನ ಸೆಳೆದರು. ಶಕುನಿ ಪಾತ್ರಧಾರಿ ಜಯಲಕ್ಷ್ಮಮ್ಮ ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸಿದರು. ವಿಕಟವಾಗಿ ನಕ್ಕು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಕಮಲಮ್ಮ ಅವರ ಭೀಮನ ಪಾತ್ರ ರಂಜನೀಯವಾಗಿತ್ತು. ಭೀಮನ ಗರ್ಜನೆ, ಧಿಮಿಗುಡುವ ಹೆಜ್ಜೆ ಸಪ್ಪಳ, ಗದೆಯನ್ನು ಬೀಸುವ ಪರಿ ಮನೋಜ್ಞವಾಗಿತ್ತು.

ಅಭಿಮನ್ಯುವಿನ ಪಾತ್ರವನ್ನು ಮೀನಾ ಸಮರ್ಪಕವಾಗಿ ನಿಭಾಯಿಸಿದರು. ಸುಭದ್ರಾ ಪಾತ್ರಧಾರಿ ಸರಸ್ವತಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದರು. ಶಶಿರೇಖೆಯಾಗಿ ಪುಟ್ಟಲಕ್ಷ್ಮಿ, ಧರ್ಮರಾಯನಾಗಿ ಬೆಳ್ಳೂರು ಲತಾ, ಭೀಷ್ಮನಾಗಿ ಜ್ಯೋತಿ, ದ್ರೋಣನ ಪಾತ್ರದಲ್ಲಿ ಪ್ರೇಮಮ್ಮ, ಸಾತ್ಯಕಿಯಾಗಿ ಶಾಂತಮ್ಮ ಪಾತ್ರ ನಿರ್ವಹಿಸಿದರು. ಪೌರುಷ, ಶೌರ್ಯ ಹಾಗೂ ಕ್ರೌರ್ಯ ಬಯಸುವ ಪೌರಾಣಿಕ ಪುರುಷ ಪಾತ್ರದಲ್ಲಿ ಮಹಿಳೆಯರು ಪುರಷರನ್ನು ನಾಚಿಸುವಂತೆ ಅಭಿನಯ ತೋರಿದರು. ಎರಡೂವರೆ ತಾಸು ನಡೆದ ಈ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.