ರಾಯಚೂರು: ಜೀವಿಸಿರುವವರೆಗೂ ರಾಜ್ಯದ ವಿವಿಧ ಭಾಗಗಳ ಬಡ ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಎನ್.ಮಲ್ಕಾಪುರ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ~ಗ್ರಾಮದ ಜನತೆಯೊಂದಿಗೆ ದೀಪಾವಳಿ ಹಬ್ಬ~ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾವು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಬೆಳೆದರೆ ಸಮಸ್ಯೆಯಾಗುತ್ತದೆ ಎಂಬ ದುರುದ್ದೇಶದಿಂದ ತಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನನಗೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದು ಆಪಾದಿಸಿದರು.
ರಾಜ್ಯದ 280 ಗ್ರಾಮಗಳಲ್ಲಿ 65 ಸಾವಿರ ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇತರ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ತಲಮಾರಿ ಗ್ರಾಮ ಪುನರ್ವಸತಿ ಯೋಜನೆಯಡಿ ನಿರ್ಮಿಸಿದ ಆಸರೆ ಮನೆಗಳ ಹಕ್ಕುಪತ್ರವನ್ನು ವಿತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಮದ ಮಹಿಳೆಯರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣದಿಂದ ವಂಚಿತಗೊಳಿಸಬಾರದು ಎಂದು ಹೇಳಿದರು.
ಗ್ರಾಮದ ಮಹಿಳೆಯರಿಗೆ ದೀಪಾವಳಿ ಹಬ್ಬದ ಉಡುಗರೆಯಾಗಿ ಸೀರೆ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ, ಹಿಂದುಳಿದ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪ, ಕಾಡಾ ಅಧ್ಯಕ್ಷ ಬ್ಯಾಗವಾಟ ಬಸನಗೌಡ, ತಿಮ್ಮಾರೆಡ್ಡಿ, ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಹರವಿ ಶಂಕರಗೌಡ, ಮುಖಂಡ ತಿಮ್ಮಾರೆಡ್ಡಿ ಗಿಲ್ಲೆಸುಗೂರು, ವರಪ್ರಸಾದರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.