ADVERTISEMENT

ಪ್ರೊ.ನಂಜುಂಡಸ್ವಾಮಿಗೆ ಬಸವಶ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಚಿತ್ರದುರ್ಗ:ಮುರುಘಾ ಮಠದ 2011ನೇ ಸಾಲಿನ `ಬಸವಶ್ರೀ~ ಪ್ರಶಸ್ತಿಯನ್ನು ರೈತ ಚಳವಳಿ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರವಾಗಿ ನೀಡಲಾಗುವುದು ಎಂದು ಮಠದ ಶಿವಮೂರ್ತಿ ಮುರುಘಾ ಶರಣರು ಪ್ರಕಟಿಸಿದ್ದಾರೆ.

ಪ್ರಶಸ್ತಿ ಫಲಕದ ಜತೆಗೆ ರೂ 3ಲಕ್ಷ ನಗದು ನೀಡಲಾಗುವುದು. ಅ. 4ರಂದು ಮುರುಘಾ ಮಠದ ಆವರಣದಲ್ಲಿ ನಡೆಯಲಿರುವ ಹಸಿರು ಸಮಾವೇಶದಲ್ಲಿ `ಬಸವಶ್ರೀ ಪ್ರಶಸ್ತಿ~ ಪ್ರದಾನ ಮಾಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿನ ನಂಜುಂಡಸ್ವಾಮಿ ಅವರು ಮಹಾಂತದೇವರು ಮತ್ತು ರಾಜಮ್ಮಣ್ಣಿ ದಂಪತಿಯ ಐದನೇ ಪುತ್ರರಾಗಿ 1936ರ ಫೆ. 13ರಂದು ಜನಿಸಿದರು. ಕುಲಾಂತರಿ ತಳಿ ತಂತ್ರಜ್ಞಾನ, ಕೃಷಿ ವಲಯಕ್ಕೆ ಕಾರ್ಪೋರೇಟ್ ಕಂಪೆನಿಗಳ ಆಗಮನ, ಕೆಂಟುಕಿ ಚಿಕನ್‌ನಂತಹ ಫಾಸ್ಟ್‌ಫುಡ್ ಸಂಸ್ಕೃತಿಯ ಅಪಾಯಗಳ ವಿರುದ್ಧ ವೈಜ್ಞಾನಿಕ ನೆಲೆಯಲ್ಲಿ ವ್ಯವಸ್ಥಿತವಾಗಿ ಹೋರಾಟ ನಡೆಸಿದ್ದರು ಎಂದು ವಿವರಿಸಿದರು.

12ನೇ ಶತಮಾನದ ಬಸವಾದಿ ಶರಣರ ಕ್ರಾಂತಿಯ ನೆಲೆಯನ್ನು ಗುರುತಿಸಿ, ಗೌರವಿಸಿ ಇಂದಿನ ಪ್ರಕ್ಷುಬ್ಧಗಳ ವಿರುದ್ಧ ಚಳವಳಿ ಚೈತನ್ಯದ ಸುಳಿಯೆಬ್ಬಿಸಲು ಹೋರಾಡುವ ಹೋರಾಟಗಾರರಿಗೆ ಆತ್ಮವಿಶ್ವಾಸ ತುಂಬುವ ಆಶಯದಿಂದ `ಬಸವಶ್ರೀ ಪ್ರಶಸ್ತಿ~ಯನ್ನು ನೀಡಲಾಗುತ್ತಿದೆ ಎಂದರು. ಮುರುಘಾಮಠ 1997ರಿಂದ `ಬಸವಶ್ರೀ ಪ್ರಶಸ್ತಿ~ ನೀಡಲು ಆರಂಭಿಸಿದೆ.

ಶರಣ ಸಂಸ್ಕತಿ ಉತ್ಸವ ಸೆ. 29ರಿಂದ ಅ. 8ರವರೆಗೆ ನಡೆಯಲಿದೆ. ಉತ್ಸವದ ಅಂಗವಾಗಿ ಜಮುರಾ ಕಪ್ ಕ್ರೀಡೋತ್ಸವ ಹಾಗೂ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ, ಮಹಿಳೆಯರ ಕಬಡ್ಡಿ ಟೂರ್ನಿ ಜರುಗಲಿದೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.