ADVERTISEMENT

ಪ್ಲಾಸ್ಟಿಕ್ ಕೈಚೀಲ ನಿಷೇಧ; ವರ್ತಕರ ಸ್ವಾಗತ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಚಿಕ್ಕಮಗಳೂರು: ಪ್ಲಾಸ್ಟಿಕ್ ಕೈಚೀಲದ ಬಳಕೆಯನ್ನು ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಪೂರಕವಾಗಿ ಸ್ಪಂದಿಸಿದ್ದರೆ, ವರ್ತಕರ ಸಂಘವೂ ಸ್ವಾಗತಿಸಿದೆ.ಮುಂಜಾನೆ ಹಾಲು ಖರೀದಿಯಿಂದ ಹಿಡಿದು ಅಂಗಡಿಯಿಂದ ಏನನ್ನು ತರಬೇಕಿದ್ದರೂ ಸಾರ್ವಜನಿಕರು ಕೈಲಿ ಬಟ್ಟೆಚೀಲ ಹಿಡಿದು ಓಡಾಡುವುದು ಈಗ ಎಲ್ಲೆಡೆ ಗಮನ ಸೆಳೆಯುತ್ತಿದೆ. ಆದರೆ, ಹೋಟೆಲ್‌ನಿಂದ ತಿಂಡಿ ಪಾರ್ಸೆಲ್ ತರುವ ಜನ ಮಾತ್ರ ಪರದಾಡುವಂತಾಗಿದೆ.

‘ಮೊದಲು ಇಡ್ಲಿ ಇದ್ದ ಪೊಟ್ಟಣದಲ್ಲಿಯೇ ಚಟ್ನಿಯನ್ನೂ ಕಟ್ಟುತ್ತಿದ್ದರು. ಜತೆಗೆ ಇನ್ನೊಂದು ಕವರ್‌ನಲ್ಲಿ ಸಾಂಬಾರ್ ಕಟ್ಟಿಕೊಡುತ್ತಿದ್ದರು. ಈಗ ಹೋಟೆಲ್‌ನವರು ಸಾಂಬರ್ ನೀಡುವುದನ್ನೇ ಕೈಬಿಟ್ಟಿದ್ದಾರೆ’ ಎಂದು ದೂರುತ್ತಾರೆ ಇಡ್ಲಿ ಸಾಂಬಾರ್ ಪ್ರಿಯ ಎನ್.ಪ್ರವೀಣ್!

‘ಪಾರ್ಸೆಲ್ ಆರ್ಡರ್ ಕೊಟ್ಟವರು ಡಬ್ಬಿ ತಂದರೆ ಮಾತ್ರ ಸಾಂಬಾರು ಹಾಕಿಕೊಡುತ್ತೇವೆ’ ಎನ್ನುವುದು ಹೋಟೆಲ್ ಮಾಲೀಕರ ವಿವರಣೆ!

ಈ ಮೊದಲು ಸಿದ್ಧವಾಗಿ ಕವರ್‌ನಲ್ಲಿರುತ್ತಿದ್ದ ಬ್ರೆಡ್‌ಗಳನ್ನು ಕಾಗದದಲ್ಲಿ ಸುತ್ತಿಯೇ ಗ್ರಾಹಕರಿಗೆ ನೀಡಲಾಗುತ್ತಿದೆ. ಮೊದಲಿನಂತೆ ರಸ್ಕ್, ಪಪ್ಸ್, ಖಾರಾ ಇತ್ಯಾದಿ ಬೇಕರಿ ಐಟಂಗಳನ್ನು 10 ವರ್ಷದ ಮೊದಲಿನ ಪದ್ಧತಿಯಂತೆ ಕಾಗದದ ಪೊಟ್ಟಣಗಳಲ್ಲಿ ಕೊಡಲಾಗುತ್ತಿದೆ.

‘ಇದು ಒಳ್ಳೇದು ಸಾರ್. ಪರಿಸರ ಉಳಿಯುತ್ತೆ. ಜಿಲ್ಲಾಧಿಕಾರಿ ಇಂಥ ತೀರ್ಮಾನವನ್ನು ಏಕಾಏಕಿ ಮಾಡಲಿಲ್ಲ. ಮಾರ್ಚ್‌ನಿಂದ ಪ್ಲಾಸ್ಟಿಕ್ ನಿಷೇಧ ಎಂದು ಫೆಬ್ರುವರಿಯಲ್ಲಿ ಸ್ಪಷ್ಟವಾಗಿಯೇ ಘೋಷಿಸಿದ್ದರು. ಹೀಗಾಗಿ ವರ್ತಕರೂ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಯಿತು. ಜನರೂ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ’ ಎನ್ನುವುದು ಬಸವನಹಳ್ಳಿಯ ಸಗಟು ವ್ಯಾಪಾರಿ ಗುಣಶೇಖರ್ ಅವರು ಅಭಿಪ್ರಾಯ.

ಆದರೆ, ಬ್ರಾಂದಿ ಪ್ರಿಯರಿಂದ ಮಾತ್ರ ಜಿಲ್ಲಾಧಿಕಾರಿ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ‘ಈ ಮೊದಲು ಕಪ್ಪು ಕವರ್‌ನಲ್ಲಿ ಬಾಟಲ್ ಕೊಡುತ್ತಿದ್ದೆವು. ಈಗ ಪೇಪರ್‌ನಲ್ಲಿ ಸುತ್ತಿ ಎಲ್ಲರಿಗೂ ಕಾಣುವಂತೆ ಮನೆಗೆ ತೆಗೆದುಕೊಂಡು ಹೋಗುವುದು ಮುಜುಗರದ ಸಂಗತಿ’ ಎನ್ನುತ್ತಾರೆ ಅತಿಥಿ ಬಾರ್‌ನ ಅರವಿಂದ್.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.