ADVERTISEMENT

ಬಂಗಾರಪೇಟೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀರಸ ತೆರೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 18:50 IST
Last Updated 19 ಜೂನ್ 2011, 18:50 IST

ಬಂಗಾರಪೇಟೆ: 41 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮತ್ತೊಮ್ಮೆ ಪಟ್ಟಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ 1ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಭಾನುವಾರ ಸರಳವಾಗಿ ಕೊನೆಗೊಂಡಿತು. ಗತವೈಭವವನ್ನು ಮತ್ತೊಮ್ಮೆ ನೆನಪಿಸುವಲ್ಲಿ ವಿಫಲವಾಯಿತು.

ಸಮ್ಮೇಳನದ ಉದ್ಘಾಟನೆಯ ದಿನ ಶಾಲಾಮಕ್ಕಳ ಉದ್ದನೆಯ ಸಾಲು ರಸ್ತೆ ತುಂಬಿ ನೋಡುಗರ ಗಮನ ಸೆಳೆದಿದ್ದರೂ ಸಭಾಂಗಣದಲ್ಲಿ ಸಭಿಕರ ತೀವ್ರ ಕೊರತೆಯು ಎರಡೂ ದಿನ ಕಾಡಿತ್ತು. ಸಮ್ಮೇಳನಕ್ಕೆ ಸಂಭ್ರಮದ ಗರಿ ಮೂಡಿಸುವ ಪ್ರಯತ್ನ ನಡೆಯಿತಾದರೂ ಕನ್ನಡ ಭಾಷಾಸಕ್ತರ ಅವಕೃಪೆಗೆ ಈಡಾಯಿತು.

ಸಮ್ಮೇಳನ ಅಧ್ಯಕ್ಷರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯುವಲ್ಲಿ ಸಂಘಟಿಕರು ಮೀನ ಮೇಷ ಎಣಿಸಿದ್ದು, ಕನ್ನಡಮ್ಮನ ತೇರು ಸಮ್ಮೇಳನದ ಮೆರವಣಿಗೆ ಹೊರಟ ನಂತರ ಪಟ್ಟಣದ ಕೆಲವು ಯುವಕರು ಸಮ್ಮೇಳನ ಅಧ್ಯಕ್ಷರನ್ನು ಕರೆತಂದರು.

ಸಮ್ಮೇಳನದ ಸಂದರ್ಭದಲ್ಲಿಯೂ ಪಟ್ಟಣದ ಕನ್ನಡ ಭವನದ ಬಾಗಿಲು ತೆರೆಯದ, ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡದ, ಮೆರವಣಿಗೆಯಲ್ಲಿ ಶಾಲಾಮಕ್ಕಳು ಆಯಾಸದಿಂದ ಮೂರ್ಛೆ ಬಿದ್ದ ಕೆಲವು ಅಹಿತಕರ ಘಟನೆಗಳು ನಡೆದವು. ಕೊನೆಗೂ ಸಮ್ಮೇಳನ ಸರಳವಾಗಿ ಸುಖಾಂತ್ಯ ಕಂಡಿತು.ಸಮ್ಮೇಳನಕ್ಕೆ ಹಾಜರಾದ ಬಹಳಷ್ಟು ಜನ ಸಮ್ಮೇಳನಕ್ಕಿಂತ ಊಟದವನ್ನು ಹಾಡಿ ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.