ಕನಕಪುರ: ಆಡಳಿತಾರೂಢ ಬಿಜೆಪಿ ಸೇರಿದಂತೆ, ಇಲ್ಲಿಯವರೆವಿಗೂ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ಬಂಜಾರ ಸಮುದಾಯವನ್ನು ನಿರ್ಲಕ್ಷ್ಯಿಸಿವೆ ಎಂದು ಕರ್ನಾಟಕ ಪ್ರದೇಶ ಬಂಜಾರ ಕಲ್ಯಾಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಾನಾಯಕ್ ಆರೋಪಿಸಿದರು.
ಪಟ್ಟಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವತಂತ್ರ ಬಂದು 6 ದಶಕಗಳು ಕಳೆದರೂ ಲಂಬಾಣಿ ತಾಂಡಗಳು ಕುಗ್ರಾಮಗಳಾಗಿಯೇ ಉಳಿದಿವೆ. ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಅಭಿವೃದ್ಧಿಯಿಂದ ದೂರ ಉಳಿದಿವೆ ಎಂದು ವಿಷಾದಿಸಿದರು.
ಲಂಬಾಣಿ ಜನಾಂಗದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದು ಸಮುದಾಯಕ್ಕೆ ತಲುಪುತ್ತಿಲ್ಲ. ಪರಿಣಾಮ ಬಡತನ ಮುಂದುವರಿದಿದೆ. ಕೇವಲ ಸಮುದಾಯಕ್ಕೆ ಹಣ ಬಿಡುಗಡೆ ಮಾಡುತ್ತೇನೆಂದು ಹೇಳಿದರೆ ಸಾಲದು, ಅವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕನಕಪುರ ತಾಲ್ಲೂಕಿನಲ್ಲಿ ಸುಮಾರು 40 ಸಾವಿರ ಬಂಜಾರ ಜನಾಂಗದವರಿದ್ದಾರೆ. ಪ್ರಸ್ತುತ ಜಿಲ್ಲಾ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಸಮುದಾಯಕ್ಕೆ ಒಂದು ಸ್ಥಾನವನ್ನು ನೀಡಲು ಯಾವುದೇ ರಾಜಕೀಯ ಪಕ್ಷಗಳು ಮುಂದಾಗದಿರುವುದು, ಜನಾಂಗದ ಬಗ್ಗೆ ರಾಜಕೀಯ ಪಕ್ಷಗಳು ತೋರುತ್ತಿರುವ ನಿರ್ಲಕ್ಷವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿರುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ದಿ.ವಿರೇಂದ್ರ ಪಾಟೀಲರು ಯೋಜನೆ ರೂಪಿಸಿದ್ದರು. ನಂತರದ ಸರ್ಕಾರಗಳು ಆ ಯೋಜನೆಯನ್ನು ಕಾರ್ಯಗತಕ್ಕೆ ತರಲಿಲ್ಲ. ಆ ಯೋಜನೆಯನ್ನು ಬಿ.ಜೆ.ಪಿ. ಸರ್ಕಾರ ಕೈಗೆತ್ತಿಕೊಂಡು ಲಂಬಾಣಿ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಮಾಡಬೇಕು ಎಂದು ಅವರು ಒತ್ತಾಯಿಸಿದರು.
ಇಂದು ತಾಂಡ್ಯಗಳಲ್ಲಿ ಬಂಜಾರ ಸಮುದಾಯದವರು ಮತಾಂತರಗೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಬಡತನ, ಶೈಕ್ಷಣಿಕ ಕೊರತೆ. ತಾಲ್ಲೂಕಿನಲ್ಲಿ ಸೌಲಭ್ಯ ದೇವರಹಳ್ಳಿ, ಕರಡಿದೊಡ್ಡಿ ತಾಂಡಗಳು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮೂಲಸೌಲಭ್ಯಗಳಿಲ್ಲ.
ಆರೋಗ್ಯ ಕೇಂದ್ರವಿಲ್ಲ. ಅನಾರೋಗ್ಯ ಪೀಡಿತರಾದರೆ ಐದಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಆರೋಗ್ಯ ಕೇಂದ್ರ ತಲುಪುವಂತಹ ಸನ್ನಿವೇಶವಿದೆ. ಚೌಕಸಂದ್ರ ಗ್ರಾಮದಲ್ಲಿ ಬಹುಸಂಖ್ಯಾ ಲಂಬಾಣಿ ಜನಾಂಗವಿದ್ದರೂ ಗ್ರಾಮದಲ್ಲಿ ಇಂದಿಗೂ ಒಂದು ಆರೋಗ್ಯ ಕೇಂದ್ರವಿಲ್ಲದಿರುವುದು ದುರದುಷ್ಟಕರ ಎಂದು ವಿಷಾದಿಸಿದರು.
ಬಿಜೆಪಿ ಸರ್ಕಾರ ಬಂಜಾರ ಸಂಘಕ್ಕೆ ಹತ್ತುಕೋಟಿ ರೂ ಬಿಡುಗಡೆ ಮಾಡಿದೆ. ಆದರೆ ಅದು ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ 100 ಕೋಟಿ ಹಣವನ್ನಾದರೂ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟರೆ ಏನಾದರೂ ಸಾಧನೆಯಾದೀತು. ಸರ್ಕಾರ ಈ ಕೂಡಲೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ನಾಯಕ್, ಪ್ರಧಾನ ಕಾರ್ಯದರ್ಶಿ ಧರ್ಮನಾಯಕ್, ಜಿಲ್ಲಾಧ್ಯಕ್ಷ ಕೆ.ಪಿ. ಚಂದ್ರನಾಯಕ್, ಜಂಟಿ ಕಾರ್ಯದರ್ಶಿ ಧನಲಕ್ಷ್ಮಿ ಬಾಯಿ ಬಾಲನಾಯಕ್ ಹಾಗೂ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.