ADVERTISEMENT

ಬರದ ಕ್ರೂರತೆ; ಮೇವಿಗೆ ಸಿದ್ಧರಬೆಟ್ಟ ಆಸರೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ತೋವಿನಕೆರೆ (ತುಮಕೂರು ಜಿಲ್ಲೆ):  `ಬೆಟ್ಟ ಸೇರಿ ಹದ್ನೈದ್ ದಿನಾದವು. ಎರಡ್ ವರ್ಷದಿಂದ ಮಳೆ ಬಿದ್ದಿಲ್ಲ. ಇಲ್ಲೂ ಸಾಕಾಗುವಷ್ಟು ಮೇವಿಲ್ಲ. ನೀರಿದೆ. ಚಿರತೆ, ಕರಡಿಯಿಂದ ಜೀವ ಭಯವಿದ್ದರೂ, ದನ-ಕರು ಉಳಿಸಿಕೊಳ್ಳಲು ಊರ‌್ಬಿಟ್ ಬಂದಿದ್ದೇವೆ. ಇಲ್ಲೂ ಮೇವು ಮುಗಿದರೆ ಏನ್ ಮಾಡ್ಬೇಕು ಎಂಬುದೇ ತೋಚುತ್ತಿಲ್ಲ~...

ಹೀಗೆ ಹೇಳುತ್ತಿದ್ದ ಕೊರಟಗೆರೆ ತಾಲ್ಲೂಕು ದಾಸಾಲುಕುಂಟೆಯ ರೈತ ಚಿಕ್ಕನಾಗಪ್ಪ ದುಃಖ ತಡೆಯಲಾರದೆ ಬಿಕ್ಕಳಿಸಿ ಕಣ್ಣೀರಿಟ್ಟರು. ಏನೇ ಆಗಲೀ  ಹಸುಗಳನ್ನು ಉಳಿಸಿಕೊಳ್ಳಲೇಬೇಕು. ಮಾರಾಟಕ್ಕೆ ಹೋದರೆ ಮೂರು ಕಾಸಿನ ಬೆಲೆ ಇಲ್ಲ. ಮಾರಿದರೂ ಮುಂದೆ ಕೊಳ್ಳುವ ಶಕ್ತಿ ನನಗಿಲ್ಲ.. ಹೀಗೆ ಕಷ್ಟದ ಕಥನ ಸಾಗುತ್ತಿತ್ತು.
-ಇದು ಚಿಕ್ಕನಾಗಪ್ಪನ ಕತೆ ಮಾತ್ರವಲ್ಲ. ಸಿದ್ಧರಬೆಟ್ಟದ ಸುತ್ತಮುತ್ತಲ ಅನೇಕ ಗ್ರಾಮಗಳ ನೂರಾರು ಕುಟುಂಬಗಳ ಕತೆಯೂ ಹೌದು.  ಅಪರೂಪದ ಗಿಡಮೂಲಿಕೆಗಳು ಇರುವ ಹೆಗ್ಗಳಿಕೆಯ ಸಿದ್ಧರಬೆಟ್ಟ ಈಗ ಬರದಿಂದ ಕಂಗೆಟ್ಟು ಸಾವಿನಂಚಿನಲ್ಲಿರುವ ಜಾನುವಾರುಗಳಿಗೆ ಹುಲ್ಲಿನ ಆಸರೆಯಾಗಿರುವುದು ಬರದ ಕ್ರೂರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ.

ಸಿದ್ಧರಬೆಟ್ಟದಲ್ಲಿ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳ ಏನಿಲ್ಲವೆಂದರೂ ಐವತ್ತಕ್ಕೂ ಹೆಚ್ಚು ಕುಟುಂಬಗಳು ಜಾನುವಾರು ಮೇಯಿಸಿಕೊಂಡು ಅಲ್ಲೇ ವಾಸ್ತವ್ಯ ಹೂಡಿವೆ. ಮನೆ, ಮಕ್ಕಳನ್ನು ಬಿಟ್ಟು ಬಂದಿರುವ ಇವರು ನಾಲ್ಕು ದಿನಕ್ಕೊಮ್ಮೆ ಬೆಟ್ಟದಿಂದ ಕೆಳಗಿಳಿದು ಬಂದು ದಿನಸಿ ಮತ್ತಿತರ ಸರಕು ಖರೀದಿಸಿ ಮರಳುತ್ತಾರೆ. ಬೆಟ್ಟದಲ್ಲೇ ಅಡುಗೆ ಮಾಡುತ್ತಾ, ಕಾಡು ಪ್ರಾಣಿಗಳ ಭಯದಲ್ಲೇ ಜೀವ ಹಿಡಿದು ಜಾನುವಾರು ರಕ್ಷಿಸಿಕೊಳ್ಳುತ್ತಿದ್ದಾರೆ.

ರಾತ್ರಿ ವೇಳೆ ಮಲಗುವುದೇ ದುಸ್ತರ. ಹುಳು-ಹುಪ್ಪಟೆ ಕಾಟ. ಭೂತಾಯಿಯೇ ಹಾಸಿಗೆ. ಆಕಾಶವೇ ಹೊದಿಕೆ. ಅಡುಗೆ ಮಾಡಿಕೊಳ್ಳುವುದು ಬಯಲಲ್ಲೇ. ದನಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದರ ಜತೆಗೆ ತಮ್ಮನ್ನೂ  ರಕ್ಷಿಸಿಕೊಳ್ಳಬೇಕು. ಸ್ವಲ್ಪ ಉದಾಸೀನ ತೋರಿದರೆ ಎಲ್ಲವೂ ಎಡವಟ್ಟು. ಬೆಟ್ಟದಲ್ಲೂ ಬೇಕಾದಷ್ಟು ಮೇವು-ನೀರು ಸಿಗುತ್ತಿಲ್ಲ ಎಂಬ ಅಳಲು ದಾಸಲುಕುಂಟೆಯ ಕಾಂತರಾಜು ಅವರದ್ದು.

ಬಹುದೂರದ ಊರಿನ ರೈತರು ವಾಹನಗಳಲ್ಲಿ ತಂಡೋಪತಂಡವಾಗಿ ಬೆಟ್ಟಕ್ಕೆ ಹಿಂಡುಹಿಂಡಾಗಿ ಬಂದು ಬಾರೆ ಹುಲ್ಲನ್ನು ಕೊಯ್ದು ಸಾಗಿಸುವ ದೃಶ್ಯವು ಬರದ ತೀವ್ರತೆಗೆ ಸಾಕ್ಷಿಯಾಗುತ್ತದೆ.ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ನೀವೆಲ್ಲ ಇಲ್ಲಿ ಆತಂಕದಿಂದ ದಿನದೂಡುವ ಬದಲು ಮೇವು ಬ್ಯಾಂಕ್‌ನಲ್ಲೇ ಮೇವು ಖರೀದಿಸಬಹುದುಲ್ಲ ಎಂಬ ಪ್ರಶ್ನೆಗೆ ರೈತ ಮಂಜುನಾಥ್, ಕಾಸು ಕೊಟ್ಟು ಮೇವು ಖರೀದಿಸುವ ಶಕ್ತಿ ನಮಗಿಲ್ಲ ಎಂದರು. ಮನೆಯಲ್ಲಿನ ಜಾನುವಾರು ಆರೋಗ್ಯವಾಗಿದ್ದರೇ ನಿಶ್ಚಿಂತೆಯಿಂದ ಬದುಕು ಸಾಗುತ್ತದೆ.

ಇಲ್ಲದಿದ್ದರೇ ಬೀದಿಗೆ ಬೀಳ್ತೀವಿ. ಎಂಥ ಕಠಿಣ ಪರಿಸ್ಥಿತಿ ಎದುರಾದರೂ, ದನಗಳನ್ನು ಉಳಿಸಿಕೊಳ್ಳಲೇ ಬೇಕು ಎಂದು ಇಲ್ಲಿಗೆ ಬಂದಿದ್ದೀವಿ ಎಂದರು.ಬೆಟ್ಟದ ಎಲ್ಲ ಭಾಗದಲ್ಲೂ ಚದುರಿದಂತೆ ರೈತರು ಬೀಡು ಬಿಟ್ಟಿದ್ದಾರೆ. ಬಾದೆ ಹುಲ್ಲು, ಕಾಡ ರಾಗಿ ಹುಲ್ಲು, ಕಲ್ಲತ್ತಿ ಮರದ ಎಲೆ, ಕೆಲ ಜಾತಿಯ ಕಾಡು ಸೊಪ್ಪುಗಳನ್ನು ಮೇವಾಗಿ ಬಳಸುತ್ತಿದ್ದಾರೆ. ದಟ್ಟಡವಿ ಮಧ್ಯೆಯಿರುವ ಅಲಸಂದೆ ಕೆರೆ ನೀರಿನ ಆಸರೆ ನೀಡಿದೆ. ಈಶ್ವರ ದೇಗುಲದ ಬಯಲಲ್ಲಿ ಕೆಲವರು ಬೀಡು ಬಿಟ್ಟು ಅಡುಗೆ ಮಾಡಿಕೊಂಡು ವಸತಿ ನೆಲೆ ಕಂಡುಕೊಂಡಿದ್ದಾರೆ.

ಹಿಂದೆ ಎಂಥಾ ಬರ ಬಂದರೂ ಬೆಟ್ಟವು ಐದಾರು ತಿಂಗಳುಗಳ ಕಾಲ ಸಾವಿರಾರು ಜಾನುವಾರುಗಳಿಗೆ ಮೇವು ಒದಗಿಸುತ್ತಿತ್ತು. ಆದರೆ, ಇದೀಗ ಬೆಟ್ಟದಲ್ಲೂ ಮೇವು ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಇಲ್ಲಿನ ಜನರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.