ADVERTISEMENT

ಬರ: ಸಮರ್ಪಕ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಶಿವಮೊಗ್ಗ: ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾಋ ಪ್ರತಿಭಟನೆ ನಡೆಸಿದರು.

ಬರ ಪರಿಹಾರ ಕಾಮಗಾರಿಯ ದುರುಪಯೋಗ, ಭ್ರಷ್ಟಾಚಾರ, ವಿಳಂಬ ತಡೆಗಟ್ಟಿ ಉಸ್ತುವಾರಿ ವಹಿಸಲು ಸರ್ವ ಪಕ್ಷಗಳನ್ನೊಳಗೊಂಡ `ತುರ್ತು ಆಪತ್ತು ನಿರ್ವಹಣಾ ಸಮಿತಿ~ಗಳನ್ನು ತಾಲ್ಲೂಕುಮಟ್ಟದಲ್ಲಿ ರಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದ 146 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಎದುರಾಗಿದೆ. ಜನರು ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ತುರ್ತಾಗಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರು ಸೇರಿದಂತೆ ಮೀನುಗಾರಿಕೆ, ಹೈನುಗಾರಿಕೆ, ನೇಕಾರ, ರೇಷ್ಮೆ, ಕುರಿ-ಕೋಳಿ-ಹಂದಿ ಸಾಕಾಣಿಕೆ, ಗ್ರಾಮೀಣ ಕುಶಲಕರ್ಮಿಗಳ ಸಾಲ ಕೂಡ ಮನ್ನಾ ಮಾಡಬೇಕು. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಬರಪೀಡಿತ ಪ್ರದೇಶಗಳ ಎಲ್ಲ ಕುಟುಂಬಗಳಿಗೆ ಉಚಿತವಾಗಿ ಪ್ರತಿ ತಿಂಗಳು 30 ಕೆ.ಜಿ. ಆಹಾರ ಧಾನ್ಯ ವಿತರಿಸಬೇಕು. ಬಡ ವಿದ್ಯಾರ್ಥಿಗಳ ಒಂದು ವರ್ಷದ ವಿದ್ಯಾಭ್ಯಾಸ ಹಾಗೂ ಆರೋಗ್ಯದ ವೆಚ್ಚ ಭರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಬೇಕು. ಜಾನುವಾರುಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರ ಬರಗಾಲ ನಿಧಿ ಸಂಗ್ರಹಕ್ಕೆ ಅಧಿಕೃತ ಕರೆ ನೀಡಬೇಕು. ಐಟಿ-ಬಿಟಿ, ಮದ್ಯ ತಯಾರಕರು, ವಿಲಾಸಿ ಹೋಟೆಲ್, ರೆಸಾರ್ಟ್ ಸೇರಿದಂತೆ ಕಾರ್ಪೋರೇಟ್ ವಲಯದ ಮೇಲೆ ವಿಶೇಷ ಬರಗಾಲ ಸೆಸ್ ವಿಧಿಸಿ, ಸಂಪನ್ಮೂಲ ಸಂಗ್ರಹಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಅಧ್ಯಕ್ಷ ಡಿ.ಸಿ. ಮಾಯಣ್ಣ, ಪ್ರಧಾನ ಕಾರ್ಯದರ್ಶಿ ಎನ್. ಪುಟ್ಟಸ್ವಾಮಿ, ಕಾರ್ಯದರ್ಶಿ ಬಿ. ಉಮೇಶ್, ಖಜಾಂಚಿ ಎಚ್.ಬಿ. ಲಿಂಗೋಜಿ ರಾವ್ ಮತ್ತಿತರರು ವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.