ADVERTISEMENT

ಬೆಂಗಳೂರಿಗೆ ಗರೀಬ್ ರಥ ಓಡಲಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:30 IST
Last Updated 15 ಫೆಬ್ರುವರಿ 2011, 18:30 IST

ಗುಲ್ಬರ್ಗ: ನಗರದಿಂದ ಬೆಂಗಳೂರಿಗೆ ಪ್ರತಿ ದಿನ ಮೂರರಿಂದ ನಾಲ್ಕು ಸಾವಿರಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದು, ಈ ಭಾಗದ ಜನತೆಯ ಅನುಕೂಲಕ್ಕಾಗಿ ಗರೀಬ್‌ರಥ ರೈಲು ಸೇವೆ ಆರಂಭಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರಜಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಆಗ್ರಹಿಸಿವೆ.ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿದ ಮನವಿಪತ್ರವನ್ನು ಸಮಿತಿಯ ಸದಸ್ಯರು ಮಂಗಳವಾರ ಬೆಳಿಗ್ಗೆ ಗುಲ್ಬರ್ಗದ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್‌ಗೆ ನೀಡಿದರು.

ಗುಲ್ಬರ್ಗ ಮೂಲದ ಸುಮಾರು ಅರ್ಧ ಲಕ್ಷಕ್ಕೂ ಹೆಚ್ಚು ಮಂದಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.ಅವರ ಅನುಕೂಲಕ್ಕಾಗಿ  ಸೋಲಾಪುರ- ಗುಲ್ಬರ್ಗ- ವಾಡಿ ಮೂಲಕ ಬೆಂಗಳೂರಿಗೆ ಗರೀಬ್ ರಥ ಆರಂಭಿಸಬೇಕು ಎಂದು ಸಮಿತಿಯ ಅಧ್ಯಕ್ಷ ಉಮಾಕಾಂತ ಬಿ. ನಿಗ್ಗುಡಗಿ ಆಗ್ರಹಿಸಿದರು.

ಗುಲ್ಬರ್ಗ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ. ಹೀಗಾಗಿ ಈ ರೈಲು ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಈಗಾಗಲೇ ಇಎಸ್‌ಐ, ಕೇಂದ್ರೀಯ ವಿ.ವಿ., ಜವಳಿ ಪಾರ್ಕ್ ಮತ್ತಿತರ ಸಂಸ್ಥೆಗಳು ಆರಂಭಗೊಂಡ ಕಾರಣ ಜನರ ಓಡಾಟ ಹೆಚ್ಚಲಿದೆ. ಅಲ್ಲದೇ ಹಿಂದುಳಿದ ಎಂದು ಕರೆಯಿಸಿಕೊಂಡಿರುವ ಹೈ.ಕ. ಪ್ರದೇಶದ ರಾಜ್ಯ ರಾಜಧಾನಿ ಸಂಪರ್ಕ ಹೆಚ್ಚಲಿದೆ. ಆ ಮೂಲಕ ಕರ್ನಾಟಕದ ಉತ್ತರ-ದಕ್ಷಿಣಗಳ ಬಾಂಧವ್ಯ ಬೆಸೆಯುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕೆ.ಪಿ.ಇ. ಸೊಸೈಟಿಯ ಮಾರುತಿ ಡಿ. ಮಾಲೆ, ಎಫ್.ಇ. ಸೊಸೈಟಿಯ ಅಬ್ದುಲ್ ಹಮೀದ್, ಎಚ್.ಕೆ.ಸಿ.ಸಿ.ಐ ಗೋಪಾಲಕೃಷ್ಣ ರಘೋಜಿ, ಬಸವರಾಜ ಹಡ್ಗೀಲ್, ರಮೇಶ ನಾವಲೆ, ನಿವೃತ್ತ ಪ್ರಾಂಶುಪಾಲ ಕೆ.ಸಿ. ಭಾವಿಮಣಿ, ಸುರೇಶ್ ಬಡಿಗೇರ, ಪ್ರಕಾಶ್ ಬಿರಾದಾರ, ರಾಜಶೇಖರ ಹಂಕುಣಿ,  ಕೆ. ಪ್ರಕಾಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.