ADVERTISEMENT

ಬೇಡಿಕೆ ಈಡೇರಿಕೆಗೆ ಶಾಸಕರ ಉಪವಾಸ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ನಾಗಮಂಗಲ:  ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರೂ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕ ಕೆ. ಸುರೇಶ್‌ಗೌಡ ಪಟ್ಟಣದ ಮಿನಿ ವಿಧಾನಸೌಧ ಮುಂದೆ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಪಕ ವಿದ್ಯುತ್ ಪೂರೈಸಬೇಕು. ನಿರಂತರ ಜ್ಯೋತಿ ಯೋಜನೆ ಪ್ರಾರಂಭಿಸಬೇಕು. ವಿದ್ಯುತ್ ಕಡಿತದಿಂದ ರೈತರಿಗೆ, ವಿದ್ಯಾರ್ಥಿಗಳಗೆ, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ವಿಷಯವನ್ನು ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳವಲ್ಲಿ ವಿಫಲರಾಗಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಹೇಮಾವತಿ ನೀರು ಸರಬರಾಜು ಮಾಡಿ ಕೆರೆ ಕಟ್ಟೆಗಳಿಗೆ ತುಂಬಿಸಬೇಕು. ಕೊಪ್ಪ ಹೋಬಳಿ ಕೊನೆ ಹಂತದ ಜಮೀನುಗಳಿಗೆ ಕೆಆರ್‌ಎಸ್‌ನಿಂದ ನೀರು ಹರಿಸಬೇಕು. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಬೇಕು. ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸೂಳೆಕೆರೆಗೆ ಹೇಮಾವತಿ ನಾಲೆಯಿಂದ ನೀರು ತುಂಬಿಸಬೇಕು. ತಾಲ್ಲೂಕಿನಲ್ಲಿ ಉಗ್ರಾಣ ಸ್ಥಾಪಿಸಬೇಕು. ಟ್ರಾನ್ಸ್‌ಫಾರ‌್ಮರ್‌ಗಳ ಕೊರತೆ ನೀಗಿಸಬೇಕು ಎಂದು ಶಾಸಕರು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರೇಗೌಡ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎನ್.ಆರ್. ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಬಿ. ಕುಮಾರ್, ಮಾಜಿ ಸದಸ್ಯ ಸತ್ಯಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಬು, ಸದಸ್ಯ ಮಕ್ಬೂಲ್ ಅಹಮದ್, ಮುಖಂಡರಾದ ಡಿ.ಟಿ. ಶ್ರೀನಿವಾಸಯ್ಯ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.