ADVERTISEMENT

ಭಾರತ ತಂಡದ ಗೆಲುವಿಗೆ ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:00 IST
Last Updated 1 ಏಪ್ರಿಲ್ 2011, 19:00 IST
ಭಾರತ ತಂಡದ ಗೆಲುವಿಗೆ ವಿಶೇಷ ಪ್ರಾರ್ಥನೆ
ಭಾರತ ತಂಡದ ಗೆಲುವಿಗೆ ವಿಶೇಷ ಪ್ರಾರ್ಥನೆ   

ದಾವಣಗೆರೆ: ಚೆಂಡನು ದಾಂಡು ಬೀಸಿ ಹೊಡೆಯುವಂತಾಗಲಿ, ಎಲ್ಲವೂ ಟಪಾರನೆ ಚಿಮ್ಮಿ ಆರಕ್ಕೇರಲಿ... ಇದೋ ದುಗ್ಗಮ್ಮ ನಿನಗೊಂದು ತೆಂಗಿನಕಾಯಿ... ನಮ್ಮ ಎಲ್ಲ ವಿಕೆಟ್‌ಗಳು ಯಾವ ವೇಗದ ಚೆಂಡಿಗೂ ಉರುಳದಿರಲಿ. ತಗೋ ನಿನಗೊಂದು ತೆಂಗಿನಕಾಯಿ...

-ಹೀಗೆಂದು ಸಾಲಾಗಿ 101 ತೆಂಗಿನಕಾಯಿ ಶುಕ್ರವಾರ ನಗರದ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದ ಮುಂದೆ ಟಪಟಪನೆ ಹೋಳಾದವು.ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ ಶೆಟ್ಟಿ ಬಣ)ಯ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ ದೃಶ್ಯವಿದು.ಭಾರತ ಮತ್ತು ಶ್ರೀಲಂಕಾ ತಂಡದ ನಡುವೆ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಶನಿವಾರ ನಡೆಯುವ ಹಿನ್ನೆಲೆಯಲ್ಲಿ ಭಾರತ ತಂಡದ ಗೆಲುವಿಗಾಗಿ ನಗರದ ವಿವಿಧ ಕಡೆಗಳಲ್ಲಿ ವಿಶೇಷ ಪ್ರಾರ್ಥನೆ ಪೂಜೆ ನಡೆಯಿತು.ನಮ್ಮ ತಂಡದ ಗೆಲುವಿಗೆ ಇರುವ ವಿಘ್ನ ನಿವಾರಿಸು ಎಂದು ದಾವಣಗೆರೆ ಕ್ರಿಕೆಟ್ ಕ್ಲಬ್ ಸದಸ್ಯರು ನಗರದ ಪಿಬಿ ರಸ್ತೆಯ ಓಂಕಾರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಸಿದರು.

ವೀಕ್ಷಣೆಗೆ ವ್ಯವಸ್ಥೆ:
ಪಾಲಿಕೆ ಆವರಣದ ರಂಗಮಂದಿರದ ಬಳಿ ಕ್ರಿಕೆಟ್ ಕ್ಲಬ್ ವತಿಯಿಂದ ಬೃಹತ್ ಪರದೆ ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತಿಳಿಸಿದ್ದಾರೆ.

ಬೆಟ್ಟಿಂಗ್ ಮತ್ತೆ ಶುರು: ನಗರದ ವಿವಿಧ ಕಡೆಗಳಲ್ಲಿ ಬೆಟ್ಟಿಂಗ್ ಜಾಲ ವ್ಯಾಪಕವಾಗಿದೆ ಆದರೆ, ಮೂಲ ಪತ್ತೆಹಚ್ಚಲಾಗುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಸಿದ್ಧ ಉಡುಪುಗಳ ಮಳಿಗೆಗಳಲ್ಲಿ ಭಾರತ ತಂಡದ ಸಮವಸ್ತ್ರ ವಿನ್ಯಾಸದ ಟಿ-ಷರ್ಟ್‌ಗಳಿಗೆ ಭಾರೀ ಬೇಡಿಕೆ ಬಂದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.