ADVERTISEMENT

ಭೂಕಂಪನ ಭಯ: ಊರು ತೊರೆದ ಜನತೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:40 IST
Last Updated 6 ಏಪ್ರಿಲ್ 2013, 19:40 IST

ಹಿರಿಯೂರು: ತಾಲ್ಲೂಕಿನ ನಾಯಕರ ಕೊಟ್ಟಿಗೆಯಲ್ಲಿ ಮಾರ್ಚ್ 31ರಿಂದ ಏ. 5ರ ಅವಧಿಯಲ್ಲಿ ನಾಲ್ಕೈದು ಬಾರಿ ಭೂಮಿ ಕಂಪಿಸಿದ ಅನುಭವದಿಂದ ಭಯಭೀತರಾದ ಗ್ರಾಮಸ್ಧರು ತಮ್ಮ ಮನೆಗಳನ್ನು ತೊರೆದು ಪಕ್ಕದ ನೆರೆಯ ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಶಿರಾ ತಾಲ್ಲೂಕುಗಳಲ್ಲಿ ಹಾಗೂ ಹಿರಿಯೂರು ಪಟ್ಟಣದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ವಲಸೆ ಹೋಗಿದ್ದಾರೆ.

ಮಾರ್ಚ್ 31ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಗುಡ್ಡದ ಸಾಲಿನಲ್ಲಿ ಸ್ಫೋಟದಂತಹ ಶಬ್ದ ಕೇಳಿದ್ದರಿಂದ ಗ್ರಾಮಸ್ಥರೆಲ್ಲ ಭಯದಿಂದ ಮನೆಗಳಿಂದ ಹೊರಗೆ ಬಂದೆವು. ಏ. 5ರಂದು ರಾತ್ರಿ 7.15 ಹಾಗೂ ಬೆಳಗಿನ ಜಾವ 5.30ರಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿ ಕಾಲು ಗಂಟೆಗೊಮ್ಮೆ ಪುನರಾವರ್ತನೆ ಆಯಿತು. ಇದರಿಂದ ಆತಂಕಗೊಂಡ ಗ್ರಾಮಸ್ಧರು ಊರು ಬಿಟ್ಟು ಹೋಗಿದ್ದಾರೆ ಎಂದು ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಸುದ್ದಿಗಾರರಿಗೆ ಶಿವರಾಂ ಎಂಬುವವರು ತಿಳಿಸಿದರು.

ಗ್ರಾಮದಲ್ಲಿ ಸುಮಾರು 100 ಮನೆಗಳಿವೆ. ಕನಿಷ್ಠ 65ಕ್ಕೂ ಹೆಚ್ಚು ಕುಟುಂಬದವರು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಗಳಿಗೆ ಬೀಗ ಹಾಕಿ ಗ್ರಾಮ ತೊರೆದಿದ್ದಾರೆ. ಪ್ರಾಥಮಿಕ ಶಾಲೆಗೆ 44 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಅಂಗನವಾಡಿಗೂ ಮಕ್ಕಳು ಹೋಗುತ್ತಿಲ್ಲ. ಈಗ ಗ್ರಾಮದಲ್ಲಿ ಸುಮಾರು ನೂರು ಪುರುಷರು ಮಾತ್ರ ಉಳಿದಿರಬಹುದು.

ತಜ್ಞರ ಭೇಟಿ: ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ನಿರ್ದೇಶಕ ಡಾ.ವೆಂಕಟಸ್ವಾಮಿ, ಆರ್. ಧರ್ಮನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಬಿ.ಡಿ. ನರಸಿಂಹಮೂರ್ತಿ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಯೋಜನಾ ವಿಜ್ಞಾನಿ ಡಾ.ಪ್ರಭು, ಡಾ.ರಶ್ಮಿ, ಭೂವಿಜ್ಞಾನಿ ಧರಣೇಶ್, ರಾಜೇಶ್ ಅವರು ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಡಾ.ಪ್ರಭು ಮಾತನಾಡಿ, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ, ದಕ್ಷಿಣ ಭಾರತವು ಗಟ್ಟಿ ಶಿಲೆಗಳ ಪರ್ಯಾಯ ದ್ವೀಪ. ಇಲ್ಲಿ 3 ಕೋಟಿ ವರ್ಷ ಹಳೆಯ ಶಿಲೆಗಳಿವೆ. ಆದ್ದರಿಂದ ಈ ಭಾಗದಲ್ಲಿ ಭೀಕರವಾದ, ದೊಡ್ಡ ಪ್ರಮಾಣದ ಭೂಕಂಪನ ಆಗುವುದಿಲ್ಲ. ಗ್ರಾಮ ತೊರೆದಿರುವ ಗ್ರಾಮಸ್ಧರು ಗ್ರಾಮಗಳಿಗೆ ಮರಳಬೇಕು ಎಂದು ತಿಳಿಸಿದರು.

ಚಿತ್ರದುರ್ಗದ ಜೋಗಿಮಟ್ಟಿ ಭೂಕಂಪನ ಮಾಪಕ ಕೇಂದ್ರದಲ್ಲಿ ಏ. 4ರಂದು 1.4 ಹಾಗೂ ಏ. 5ರಂದು 1.2ರಷ್ಟು ಭೂಕಂಪನ ದಾಖಲಾಗಿದೆ. ಇದು ಸಾಮಾನ್ಯವಾಗಿ ನಡೆಯುವಂತಹದ್ದು. ನಾಯಕರಕೊಟ್ಟಿಗೆ, ಯಲ್ಲದಕೆರೆಯಲ್ಲಿ ಭೂಕಂಪನ ಅಳೆಯುವ ಯಂತ್ರ ಅಳವಡಿಸಿ 20 ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿ ಪರಿಸ್ಥಿತಿಯ ಅಧ್ಯಯನ ನಡೆಸಲಾಗುವುದು. ನೈಸರ್ಗಿಕ ವಿಕೋಪ, ಹವಾಮಾನ ಮುನ್ಸೂಚನೆ, ಮಳೆ, ಗಾಳಿಯ ಬಗ್ಗೆ ಸಹಾಯವಾಣಿಗೆ (ಮೊಬೈಲ್: 92433 45433)  ಕರೆ ಮಾಡಿ ರಾಜ್ಯ ನೈಸರ್ಗಿಕ ಉಸ್ತವಾರಿ ಕೇಂದ್ರದಿಂದ ಮಾಹಿತಿ ಪಡೆಯಬಹುದು. ಹೀಗಾಗಿ ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.