ADVERTISEMENT

ಮೊಡಂಕಾಪು-ಕೈಕಂಬ ರಸ್ತೆ ಕೆಸರುಮಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST
ಮೊಡಂಕಾಪು-ಕೈಕಂಬ ರಸ್ತೆ ಕೆಸರುಮಯ
ಮೊಡಂಕಾಪು-ಕೈಕಂಬ ರಸ್ತೆ ಕೆಸರುಮಯ   

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮೊಡಂಕಾಪು-ಕೈಕಂಬ ಪೊಳಲಿ ದ್ವಾರ ರಸ್ತೆಯ ಎರಡೂ ಬದಿ ಇದ್ದ ಚರಂಡಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮುಚ್ಚಿ ಹೋಗಿದೆ. ಮೊಡಂಕಾಪು ರಸ್ತೆಯುದ್ದಕ್ಕೂ ಮಳೆ ನೀರು ಹರಿಯುತ್ತಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿನ ದೀಪಿಕಾ ಪ್ರೌಢಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ಥಳೀಯ ವನದುರ್ಗಾ ನಾಗ ದೇವಾಲಯಕ್ಕೆ ತೆರಳುವ ಭಕ್ತರ ಪಾಡು ಹೇಳತೀರದು. ಈ ರಸ್ತೆ ಬದಿಯಲ್ಲಿ ಸಾಗುವಾಗ ವಾಹನ ಬಂದರೆ, ಕೆಸರು ನೀರಿನ ಅಭಿಷೇಕ ಖಚಿತ.

ಸೇತುವೆ ಶಿಥಿಲ: ಹಳೆಯ ರೈಲ್ವೆ ಮೇಲ್ಸೇತುವೆ ತುಕ್ಕು ಹಿಡಿದಿದ್ದು, ಆಧಾರ ಸ್ತಂಭಗಳು ಕುಸಿತದ ಭೀತಿ ಎದುರಿಸುತ್ತಿವೆ. ಮೇಲ್ಸೇತುವೆ ಅಡಿಭಾಗದಲ್ಲಿ ಹಾದುಹೋಗಿರುವ ಕಿರಿದಾದ ರಸ್ತೆಯಲ್ಲಿ ಸರಗಳ್ಳರ ಹಾವಳಿಯೂ ಹೆಚ್ಚಿದೆ. ಕಳೆದ ವರ್ಷ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಬ್ಬರು ಒಂಟಿ ವಿದ್ಯಾರ್ಥಿನಿ ಕತ್ತಿನಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಇತ್ತೀಚೆಗಷ್ಟೇ ಇ್ಲ್ಲಲಿನ ದೈಹಿಕ ಶಿಕ್ಷಕರೊಬ್ಬರ ಮನೆಯಲ್ಲಿ ಹಾಡಹಗಲೇ ಚಿನ್ನಾಭರಣ ಕಳವಾಗಿದೆ.

ADVERTISEMENT

ಬಿ.ಸಿ.ರೋಡ್ ಪ್ರಮುಖ ವೃತ್ತದ ಬಳಿ ಇರುವ ಹಳೆಯ ರೈಲ್ವೆ ಮೇಲ್ಸೇತುವೆ ಸೇರಿದಂತೆ ಮೊಡಂಕಾಪು ರೈಲ್ವೆ ಮೇಲ್ಸೇತುವೆ ಪುನರ್‌ನಿರ್ಮಿಸಬೇಕು. ಸಮೀಪದ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಬಳಿ ಹೊಸ ಮೇಲ್ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಕಳೆದ ವರ್ಷ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಸ್ಥಳೀಯರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.