ADVERTISEMENT

ಯುವಕರಿಗೆ ಋಷಿ-ಮುನಿಗಳು ಆದರ್ಶರಾಗಲಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೀದರ್: ಇಂದಿನ ಯುವ ಜನಾಂಗವು ಕ್ರಿಕೆಟ್ ಮತ್ತು ಸಿನಿಮಾ ತಾರೆಯರನ್ನು ಅನುಕರಿಸದೆ ವಿವೇಕಾನಂದರಂತಹ ಋಷಿ-ಮುನಿಗಳು, ಮಹಾತ್ಮ ಗಾಂಧೀಜಿ, ಸುಭಾಷ್‌ಚಂದ್ರ ಭೋಸ್ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಕಿವಿಮಾತು ಹೇಳಿದರು.

ರಾಮಕೃಷ್ಣ-ವಿವೇಕಾನಂದ ಆಶ್ರಮವು ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈಸ್ಕೂಲ್-ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವ ವರದಿಗಳು ಬರುತ್ತಿವೆ. ಸಣ್ಣ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾದರೆ ಓದಿನಲ್ಲಿ ಹೇಗೆ ಆಸಕ್ತಿ ಬರಲು ಸಾಧ್ಯ? ಅಂತಹವರಿಗೆ ವಿವೇಕಾನಂದ ಅವರ ಮಾತುಗಳು ಹೇಗೆ ಕೇಳಲು ಸಾಧ್ಯ? ಎಂದು ಪ್ರಶ್ನಿಸಿದ ಅವರು ಅದೇ ಸ್ಥಿತಿ ಮುಂದುವರೆದರೆ ಭವಿಷ್ಯ ಕತ್ತಲಾಗುತ್ತದೆ ಎಂದು ಎಚ್ಚರಿಸಿದರು.

ಜಾಗತೀಕರಣದ ನಂತರ ಇಡೀ ಜಗತ್ತು ಹಳ್ಳಿಯಾಗಿ ಪರಿಣಮಿಸಿದೆ. ಅದು ಕೇವಲ ಮಾರುಕಟ್ಟೆಗೆ ಮಾತ್ರ ಸೀಮಿತ ಆಗಬಾರದು. ಅದರ ಬದಲಿಗೆ ವಿವೇಕಾನಂದರು ಪ್ರತಿಪಾದಿಸಿದಂತೆ `ವಿಶ್ವ ಕುಟುಂಬಿ~ಗಳಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.