ADVERTISEMENT

ಯುವಜನೋತ್ಸವಕ್ಕೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಗುಲ್ಬರ್ಗ: ಹಚ್ಚ ಹಸಿರಿನ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಎಲ್ಲೆಲ್ಲೂ ಸಡಗರ, ಸಂಭ್ರಮ ತುಂಬಿದ ಹಬ್ಬದ ವಾತಾವರಣ. ಕಾರ್ಯಸೌಧ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವಿಜ್ಞಾನ ವಿಭಾಗದ ವಿವಿಧ ಸಭಾಂಗಣದ ಮುಂದೆ ಬಣ್ಣ, ಬಣ್ಣದ ಬಟ್ಟೆ, ಬುಗುರಿ, ರಂಗೋಲಿ ಹಾಕಿ ಶೃಂಗರಿಸಲಾಗಿತ್ತು. 

ಮುಖವಾಡ, ಬುಡಕಟ್ಟು, ಜಾನಪದ ವೇಷ ತೊಟ್ಟ ಯುವಕರು ಡೊಳ್ಳಿನ ತಾಳಕ್ಕೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯುವಕರ ಅಮಿತೋತ್ಸಾಹ ಕಂಡ ಅತಿಥಿಗಳು ಸಹ  ತರುಣರಂತೆ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಜಾನಪದ ಗಾಯಕ ಬಾನಂದೂರು ಕೆಂಪಯ್ಯ,  ಮಾತಿಗಿಂತ ಕೃತಿಯೇ ಲೇಸೆಂದು ಜಾನಪದ, ತತ್ವಗೀತೆ ಹಾಡಿ  ರಂಜಿಸಿದರು.

ಏಕವ್ಯಕ್ತಿ, ಸಮೂಹ ಗಾಯನ, ಕ್ಲೇ ಮಾಡೆಲಿಂಗ್, ಪೋಸ್ಟರ್ಸ್‌ ಪೇಂಟಿಂಗ್ ಇನ್ನಿತರ ಸ್ಪರ್ಧೆಗಳು ಸಂಜೆವರೆಗೂ ಜರುಗಿದವು.ಗುರುವಾರದಿಂದ 3ದಿನ ನಡೆಯಲಿರುವ ಅಂತರ ಮಹಾವಿದ್ಯಾಲಯ ಯುವಜನೋತ್ಸವದಲ್ಲಿ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ವಿವಿಧ ತಾಲ್ಲೂಕಿನ 33 ಕಾಲೇಜಿನ 310 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.