ಧಾರವಾಡ: `12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡೆದ ವಚನ ಸಾಹಿತ್ಯದ ಚಳವಳಿ ದೇಶ ಕಂಡ ಬಹುದೊಡ್ಡ ಕ್ರಾಂತಿಯಾಗಿದೆ~ ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.
ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ ಯುಜಿಸಿಯ ಸ್ಯಾಪ್ ಅನುದಾನದಡಿ ಬುಧವಾರ ಹಮ್ಮಿಕೊಂಡಿದ್ದ ಎರಡು ದಿನಗಳ `ಶಿವಶರಣರ ವಿಚಾರಧಾರೆ~ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಬಸವಕಲ್ಯಾಣದ ಕ್ರಾಂತಿ ಅದ್ಹೇಗೋ ಕಾಶ್ಮೀರವನ್ನೂ ಮುಟ್ಟಿ ರಾಜನಾಗಿದ್ದ ಮೋಳಿಗೆ ಮಾರಯ್ಯನನ್ನೂ ತಲುಪಿತು. ಅಷ್ಟರ ಮಟ್ಟಿಗೆ ಈ ಚಳವಳಿ ಪ್ರಭಾವಿಯಾಗಿದ್ದರಿಂದಲೇ ಇತರ ರಾಜ್ಯಗಳಿಂದಲೂ ಶರಣರು ಬಂದು ಭಾಗವಹಿಸಿದರು~ ಎಂದರು.
`ವಚನ ಸಾಹಿತ್ಯವು ಬುದ್ಧನ ಚಿಂತನೆಗಳಿಂದ ಏನನ್ನು ಪಡೆಯಿತು ಎಂಬ ಬಗ್ಗೆ ಸಾಕಷ್ಟು ಸಂಶೋಧನೆಗಳ ನಡೆದಿಲ್ಲ. ಆ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ~ ಎಂದೂ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಡಾ.ನಟರಾಜ ಹುಳಿಯಾರ್, `ಶರಣ ಎಂಬ ಪದ ಆಧುನಿಕ ಪರಿಭಾಷೆಯಲ್ಲಿ ಗುರುತಿಸುವ `ಸಂಗಾತಿ~ ಪದವನ್ನು ಹೋಲುತ್ತದೆ. ಶಿವರಶರಣರು ಬರೆದ ವಚನಗಳು ಹೊಸ ವಿಮರ್ಶೆಯ ಲೋಕವನ್ನೇ ಸೃಷ್ಟಿಸಿತು~ ಎಂದರು.
ನಂತರ ನಡೆದ ಗೋಷ್ಠಿಗಳಲ್ಲಿ `ಅಲ್ಲಮನ ಪ್ರಮುಖ ವಿಚಾರಗಳು~, `ಅಲ್ಲಮನ ತತ್ವಜ್ಞಾನ~, `ಅಲ್ಲಮನ ವಚನಗಳ ಭಾಷೆ, ಶೈಲಿ~, `ಬಸವಣ್ಣನ ಸಾಮಾಜಿಕ ಪ್ರಜ್ಞೆ~, `ಬಸವಣ್ಣನ ಆರ್ಥಿಕ ವಿಚಾರಗಳು~, `ಬಸವಣ್ಣನ ವಚನಗಳ ಭಾಷೆ, ಶೈಲಿ~, `ಚನ್ನಬಸವಣ್ಣನ ವಚನಗಳಲ್ಲಿ ದಾರ್ಶನಿಕತೆ~, `ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ವಿಡಂಬನೆ~ ಕುರಿತು ತಜ್ಞರು ಪ್ರಬಂಧ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.