ADVERTISEMENT

ವಚನ ಸಾಹಿತ್ಯ ದೀವಿಗೆ ಆಗಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 6:45 IST
Last Updated 7 ಫೆಬ್ರುವರಿ 2011, 6:45 IST

ಶಿವಮೊಗ್ಗ: ಇಂದು ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಕ್ತ ಸಮಾಜ ನಿರ್ಮಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಚನ ಸಾಹಿತ್ಯ ನಮಗೆ ದೀವಿಗೆ ಆಗಬೇಕು ಎಂದು ವಿಧಾನ ಸಭೆ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ ತಿಳಿಸಿದರು.

ನಗರದ ಬೆಕ್ಕಿನ ಕಲ್ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಹಂಭಾವ ಹೆಚ್ಚುತ್ತಿದೆ. ಆದರ್ಶ ಸಮಾಜ ನಿರ್ಮಾಣಕ್ಕೆ ‘ಎನಗಿಂತ ಕಿರಿಯರಿಲ್ಲ; ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ ಶರಣರ ತತ್ವ ಅನುಸರಿಸಬೇಕು. ಶರಣರಲ್ಲಿನ ದೊಡ್ಡ ಗುಣಗಳು, ಧಾರಾಳತೆ ಅಳವಡಿಸಿಕೊಳ್ಳುವ ಆವಶ್ಯಕತೆ ಇದೆ ಎಂದು ಸೂಚ್ಯವಾಗಿ ಹೇಳಿದರು.
ನಿಷ್ಠಾವಂತ, ಪ್ರಾಮಾಣಿಕರು ಸಮಾಜಕ್ಕೆ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶರಣ ಸಾಹಿತ್ಯ ನಮಗೆ ಮಾರ್ಗದರ್ಶನವಾಗಬೇಕು. ಪ್ರಜಾತಂತ್ರ ವ್ಯವಸ್ಥೆ ಯಶಸ್ವಿಯಾಗಬೇಕು ಎಂದರು. ಮಲೆನಾಡು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಎಲ್ಲದರಲ್ಲೂ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ಬಣ್ಣಿಸಿದರು.

‘ವಚನ ಪಚನ ಮಾಡಿಕೊಳ್ಳಲಿ’
ಕತ್ತಿಗೆ ಚನ್ನಪ್ಪ ಅವರ ‘ನೇಗಿಲ ಬಾಳು’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಪ್ರೊ.ಶ್ರೀಕಂಠ ಕೂಡಿಗೆ, ಇಂದಿನ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ವಚನಗಳನ್ನು ಪಚನ ಮಾಡಿಕೊಂಡು ಓದಿದರೆ ಸ್ವಚ್ಛ ಸಮಾಜದ ಕೀಲಿಕೈ ಸಿಗಲಿದೆ. ಆದರೆ, ಇದನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳುತ್ತಿಲ್ಲ. ದುರಾಸೆಯೇ ನಮ್ಮ ಇಂದಿನ ಸ್ಥಿತಿಗೆ ಕಾರಣ ಎಂಬುದನ್ನು ತಿಳಿಯಬೇಕು ಎಂದು ವಿಶ್ಲೇಷಿಸಿದರು.

ಇಂದಿನ ರಾಜಕಾರಣ, ಸಾಮಾಜಿಕ ಸ್ಥಿತಿಗತಿಯಲ್ಲಿ ವಚನಕಾರರು ಪ್ರಸ್ತುತವಾಗಿದ್ದಾರೆ. ಶರಣರ ಮೌಲ್ಯಗಳು ಪುನರುಜ್ಜೀವಗೊಳ್ಳಬೇಕಿದೆ. ವಚನ ಯುಗಕ್ಕೆ ಮರಳಬೇಕಾದ ಕಾಲಘಟ್ಟದಲ್ಲಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಶರಣರ ಕಾಲದಲ್ಲಿ ವಿಶ್ವವಿದ್ಯಾಲಯಗಳಿರಲಿಲ್ಲ. ಅಕ್ಷರಸ್ಥರೂ ಇರಲಿಲ್ಲ. ಆದರೆ, ಅಪಮೌಲ್ಯ, ಭ್ರಷ್ಟಾಚಾರ, ಅಕ್ರಮ ಸಂಪಾದನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಆದರೆ, ಇಂದು ಅದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದೇವೆ ಎಂದು ತೀಕ್ಷ್ಣವಾಗಿ ನುಡಿದರು.

ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಉಪಸ್ಥಿತರಿದ್ದರು. ಸಾಹಿತಿ ಹೀ.ಚ. ಶಾಂತವೀರಯ್ಯ, ‘ರಾಘವಾಂಕ ಕವಿಯ ಸಿದ್ಧರಾಮ’ ಕುರಿತು ಉಪನ್ಯಾಸ ನೀಡಿದರು. ಮಹಾದೇವಮ್ಮ ಪ್ರಾರ್ಥಿಸಿದರು. ಕೆ. ರಾಜು ಸ್ವಾಗತಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.