ADVERTISEMENT

ವಿದ್ಯುತ್ ಸಮಸ್ಯೆ: ಒಣಗುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಒಂದಡೆ ರೈತರು ಬೆಳೆದಿದ್ದ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ಪಟ್ಟಣ ಪ್ರದೇಶದ ಜನರ ವಿದ್ಯುತ್ ಚೆಲ್ಲಾಟದಿಂದ ದಿನನಿತ್ಯದ ವ್ಯವಹಾರಗಳಿಗೂ ತೊಂದರೆ ಪಡುವಂತಾಗಿದೆ.

ಅನಿಯಮಿತ ವಿದ್ಯುತ್ ಪೂರೈಕೆ ಪರಿಣಾಮ ರೈತರು ಬೆಳೆದ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಕೊಳವೆ ಬಾವಿಗಳಿದ್ದರೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಬರದ ಕಾರಣ ಕೆರೆ-ಕುಂಟೆಗಳಲ್ಲಿ ನೀರು ಬತ್ತಿಹೋಗಿದ್ದು, ಜಾನವಾರುಗಳು ಗುಟುಕು ನೀರಿಗೂ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ನೆಲಗಡಲೆ, ಜೋಳ, ರಾಗಿ, ತರಕಾರಿ ಹಾಗೂ ಮತ್ತಿತರ ಬೆಳೆಗಳು ನೀರಿಲ್ಲದೆ ಸೊರಗಿ ನಿಂತಿವೆ.

ಜೀವನ ನಿರ್ವಹಣೆಗಾಗಿ ಕೆಲವು ರೈತರು ಕೂಲಿ ಕೆಲಸಕ್ಕೆ ಹೋಗಿ ಹಣ ಹೊಂದಿಸುತ್ತಾರೆ. ಅನಿಯಮಿತ ವಿದ್ಯುತ್ ಪೂರೈಕೆ ಸಲುವಾಗಿ ವ್ಯಾಪಾರ ವಹಿವಾಟು ಕಳೆಗುಂದಿವೆ. ಹೀಗಾಗಿ, ಕೂಲಿ ಕೆಲಸ ಕಡಿಮೆಯಾಗುತ್ತಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್ ಒದಗಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಕುಡಿಯುವ ನೀರಿಗೂ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಾಲ್ಲೂಕು ಪ್ರಾಂತ ರೈತ ಸಂಘ ಅಧ್ಯಕ್ಷ ಆರ್‌ಚಂದ್ರಶೇಖರರೆಡ್ಡಿ ತಿಳಿಸಿದರು.

ವಿದ್ಯುತ್ ವೇಳಾ ಪಟ್ಟಿಗೆ ಆಗ್ರಹ: ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಲೋಡ್‌ಶೆಡ್ಡಿಂಗ್ ಅನಿವಾರ್ಯವಾದರೆ ಸರ್ಕಾರ ವಿದ್ಯುತ್ ಪೂರೈಕೆಗೆ ನಿಗದಿತ ವೇಳಾಪಟ್ಟಿ ಬಿಡುಗಡೆ ಮಾಡಬೇಕು. ಹಾಗಾದಾಗ ನಮ್ಮ ದಿನನಿತ್ಯ ಚಟುವಟಿಕೆಗಳನ್ನು ಗುರುತಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಗಂಟೆಗಟ್ಟಲೆ ವಿದ್ಯುತ್‌ಗಾಗಿ ಕಾದು ಕುಳಿತುಕೊಳ್ಳಬೇಕಿದೆ. ಕೂಡಲೆ ವಿದ್ಯುತ್ ಕಡಿತಕ್ಕೆ ನಿಗದಿತ ಸಮಯ ತಿಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT