ADVERTISEMENT

ವಿಶೇಷ ಸ್ಥಾನಮಾನ:ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ಮಸ್ಕಿ: ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದು ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಒಪ್ಪಿಗೆ ನೀಡಿರುವುದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇಲ್ಲಿಯ ವಿವಿಧ ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಕೇಂದ್ರ ಸಂಪುಟದ ರಾಜಕೀಯ ಸಮಿತಿಯ ನಿರ್ಧಾರವನ್ನು ಸ್ವಾಗತಿಸಿದರು.

371ನೇ ಕಲಂ ತಿದ್ದುಪಡಿಗೆ ಬರುವ ಸಂಸತ್ ಆಧಿವೇಶನದಲ್ಲಿ ಅಂಗೀಕಾರ ಪಡೆಯಬೇಕು. ಆಗ ಮಾತ್ರ ಈ ಭಾಗದ ದಶಕಗಳ ಹೋರಾಟಕ್ಕೆ ನಿಜವಾದ ಜಯ ದೊರಕಿದಂತೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಅಧ್ಯಕ್ಷ ಅಶೋಕ ಮುರಾರಿ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ಕೇಂದ್ರ ಸಚಿವ ಸಂಪುಟದ ರಾಜಕೀಯ ಸಮಿತಿಯ ಮಹತ್ವದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿವೆ.

ವಿಜಯೋತ್ಸವ:  ಜಯ ಕರ್ನಾಟಕ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಕಾರ್ಯಕರ್ತರು ಶನಿವಾರ ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು.

ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರು ಒಡೆಯರ, ಕಿರಣ್ ಮುರಾರಿ, ರಕ್ಷಣಾ ವೇದಿಕೆಯ ಮಲ್ಲಯ್ಯ ಮುರಾರಿ, ಭೀಮರಾವ್ ಮುರಾರಿ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಅನೇಕ ಜನರು ಪಾಲೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.